ಸುಳ್ಯ: ಗ್ರಾಮೀಣ ಭಾಗದಲ್ಲಿ ನಾಲ್ಕು ದಶಕಗಳಿಂದ ಬಸ್ ಓಡಾಟ ನಡೆಸಿ ಹಳ್ಳಿ ಜನರ ಜನಜೀವನದ ಜೀವನಾಡಿಯಾಗಿದ್ದ ಅವಿನಾಶ್ ಟೂರ್ ಅಂಡ್ ಟ್ರಾವೆಲ್ಸ್ ಮಾಲೀಕ ನಾರಾಯಣ ರೈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿಯೇ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಗಟ್ಟಿ ಮನಸ್ಸನ್ನು ಏಕೆ ಮಾಡಿದರು ಅನ್ನುವುದೇ ಎಲ್ಲರಿಗಿದ್ದ ಕುತೂಹಲ. ಈ ಎಲ್ಲ ಕುತೂಹಲಕ್ಕೆ ಉತ್ತರ ಎಂಬಂತೆ ಆತ್ಮಹತ್ಯೆಗೂ ಕೆಲವೇ ಹೊತ್ತಿಗೂ ಮುನ್ನ ನಾರಾಯಣ ರೈ ತಮ್ಮ ಮನೆಯವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಜತೆಗೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಡೆತ್ ನೋಟ್ ನಲ್ಲಿ ನಾರಾಯಣ ರೈ ಬರೆದಿದ್ದೇನು?
ನಾರಾಯಣ ರೈ ಅವರು ಅರಂಬೂರಿನಲ್ಲಿ ವಾಸವಾಗಿದ್ದರು. ಪತ್ನಿ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದರು. ಇವರೊಂದಿಗೆ ಸಮೀಪದ ಮನೆಯ ಯುವಕನೊಬ್ಬ ಮನೆಯಲ್ಲಿ ಯಾರೂ ಇಲ್ಲದ ಕಾರಣಕ್ಕೆ ಉಳಿದುಕೊಂಡಿದ್ದರು. ರಾತ್ರಿ ೧೧.೪೫ಕ್ಕೆ ನಾರಾಯಣ ರೈ ಅವರು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವನ್ನು ತಮ್ಮ ತಂಗಿ ನಳಿನಿ ಅವರಿಗೆ ವಾಟ್ಸ್ ಅಪ್ನಲ್ಲಿ ಸಂದೇಶ ಕಳಿಸಿದ್ದರು. ತಡರಾತ್ರಿ ಆಗಿದ್ದರಿಂದ ಆ ಸಂದೇಶವನ್ನು ನಳಿನಿ ಓದಿರಲಿಲ್ಲ. ಬೆಳಗ್ಗೆ ನೋಡಿದಾಗ ಶಾಕ್ ಆಗಿ ಸ್ಥಳೀಯರೊಬ್ಬರಿಗೆ ಕರೆ ಮಾಡಿ ಮನೆಯಲ್ಲಿ ಏನಾಗಿದೆ ಎಂದು ನೋಡುವಂತೆ ತಿಳಿಸಿದರು. ಅಷ್ಟರೊಳಗೆ ನಾರಾಯಣ ರೈ ಆತ್ಮಹತ್ಯೆ ಮಾಡಿಕೊಂಡು ಗಂಟೆಗಳೇ ಉರುಳಿ ಹೋಗಿದ್ದವು. ಪಕ್ಕದಲ್ಲಿ ಡೆತ್ ನೋಟ್ ಕೂಡ ಸಿಕ್ಕಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನಿಂದ ಯಾರಿಗೂ ಸಮಸ್ಯೆ ಆಗಬಾರದು. ನನ್ನ ಮರಣದ ನಂತರ ಬಸ್ ಗಳ ಓಡಾಟವನ್ನು ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿಕೊಂಡು ಬಸ್ ಓಡಾಟ ನಡೆಯಬೇಕು ಅನ್ನುವುದನ್ನು ಅವರು ಡೆತ್ ನೋಟ್ ನಲ್ಲಿ ವಿವರಿಸಿದ್ದರು.