ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೈಬರ್ ಚೋರರ ಹಾವಳಿ ದಿನೇ ದಿನೇ ಹೆಚ್ಚಾಗತೊಡಗಿದೆ. ಇಷ್ಟು ದಿನ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ತಂಡ ಇದೀಗ ಹೊಸ ಕುತಂತ್ರವೊಂದನ್ನು ಕಂಡುಕೊಂಡಿದೆ. ಎಟಿಎಂ ಡೇಟಾವನ್ನೇ ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿರುವ ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಖದೀಮರ ಈ ಹೊಸ ರೀತಿಯ ಕುತಂತ್ರ ಬೆಂಗಳೂರಿನ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಕದ್ದಿದ್ದು ಹೇಗೆ? ಎಷ್ಟು?
ಎಟಿಎಂ ಯಂತ್ರಗಳಿಗೆ ಪೆನ್ ಡ್ರೈವ್ ಹಾಕಿ ಗ್ಯಾಂಗ್ ಡೇಟಾ ಸಂಗ್ರಹಿಸುತ್ತಿದೆ. ಕೆ. ಜಿ. ರಸ್ತೆ ಹಾಗೂ ಗಾಂಧಿನಗರದ ಎಸ್ ಬಿಐ ಎಟಿಎಂ ಕೇಂದ್ರ ಬಳಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಹಂತ ಹಂತವಾಗಿ ಎಟಿಎಂ ಯಂತ್ರದಿಂದ 13. 50 ಲಕ್ಷ ರೂಪಾಯಿಯನ್ನು ಸೈಬರ್ ಚೋರರು ಲಪಟಾಯಿಸಿದ್ದಾರೆ. ಘಟನೆ ಬಳಿಕ ಪಶ್ಚಿಮ ವಿಭಾಗದ ಸೈಬರ್ ಠಾಣೆಗೆ ಎಸ್ ಬಿಐ ಕಚೇರಿಯ ಮುಖ್ಯ ಅಧಿಕಾರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ಚೋರರಿಗಾಗಿ ಬಲೆ ಬೀಸಿದ್ದಾರೆ. ಕೆ ಜಿ ರಸ್ತೆ ಹಾಗೂ ಗಾಂಧಿನಗರದ ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಜಾಲಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.