ಬಾಲಚಂದ್ರ ಕೋಟೆ,ಕ್ರೀಡಾ ಪತ್ರಕರ್ತ
ಅಬುಧಾಬಿ: ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ಆಡುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಪಂದ್ಯ ಆರಂಭವಾಗಲಿದೆ. ಅಫ್ಘಾನಿಸ್ತಾನ ಗೆಲ್ಲಲಿ ಅನ್ನುವುದು ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಾರ್ಥನೆಯಾಗಿದೆ. ಯಸ್..ಈ ಒಕ್ಕೊರಲಿನ ಪ್ರಾರ್ಥನೆಗೆ ಮುಖ್ಯ ಕಾರಣ ಟೀಂ ಇಂಡಿಯಾದ ಮುಂದಿನ ಹಾದಿ. ಈಗಾಗಲೇ ಕೂಟದಿಂದ ಹೊರ ಬೀಳುವ ಆತಂಕದಲ್ಲಿರುವ ಕೊಹ್ಲಿ ಪಡೆಗೆ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರಷ್ಟೇ ಸೆಮೀಸ್ ಕನಸು ಜೀವಂತವಾಗಿ ಉಳಿಯಲಿದೆ. ಈ ಒಂದು ಕಾರಣದಿಂದ ಅಭಿಮಾನಿಗಳು ಮಾತ್ರವಲ್ಲ ಇಡೀ ಟೀಂ ಇಂಡಿಯಾ ಆಟಗಾರರು ಇಂದು ಟೀವಿ ಮುಂದೆ ಕುಳಿತುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಭ್ಯಾಸ ಪಂದ್ಯಗಳೆರಡರಲ್ಲಿ ಭರ್ಜರಿಯಾಗಿ ಗೆದ್ದು ವಿಶ್ವಕಪ್ ಗೆಲ್ಲುವ ತಂಡಗಳಲ್ಲಿ ಒಂದು ಎಂಬ ನಿರೀಕ್ಷೆ ಹುಟ್ಟಿಸಿದ ಭಾರತ ಬಳಿಕ ಪ್ರಾರಂಭದಿಂದಲೇ 2 ಪಂದ್ಯಗಳಲ್ಲಿ ಮುಗ್ಗರಿಸಿದೆ. ಇದರಿಂದ ಭಾರತದ ಸೆಮೀಫೈನಲ್ ಹಾದಿ ಕಷ್ಟವಾಗಿದ್ದು, ಭಾರಿ ರನ್ ರೇಟ್ ಮೂಲಕ ಮುಂದಿನ ನಮೀಬಿಯಾ ವಿರುದ್ಧ ಗೆದ್ದರೂ ಅಫ್ಘಾನ್ ಗೆಲುವಿಗೆ ಎದುರು ನೋಡಬೇಕಿದೆ. ಒಂದು ವೇಳೆ ಅಫ್ಘಾನ್ ಇಂದು ಸೋತರೆ ಭಾರತಕ್ಕೆ ನಾಳಿನ ಪಂದ್ಯ ಕೇವಲ ಔಪಚಾರಿಕವಾಗಿದೆ.
ಇತ್ತ ಕಿವೀಸ್ ತಂಡಕ್ಕೂ ಗೆಲುವು ಅನಿವಾರ್ಯವಾಗಿದ್ದು, ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ ಸೋತು ಬಳಿಕ ಎರಡೂ ಪಂದ್ಯದಲ್ಲಿ ಗೆದ್ದಿದೆ.ಆದರೂ ಭಾರತವೇ ರನ್ ರೇಟ್ ನಲ್ಲಿ ಮುಂದಿರುವ ಕಾರಣ ಕಿವೀಸ್ ಈ ಪಂದ್ಯಕ್ಕೆ ಹೆಚ್ಚು ಮಹತ್ವ ನೀಡಿದೆ. ಎರಡೂ ತಂಡಗಳ ಬೌಲಿಂಗ್ ಸಮಬಲ ಹಾಗೂ ಬಲಾಢ್ಯವಿದೆ. ಬೌಲ್ಟ್ ಹಾಗೂ ಸೌಥಿ ಮುಂದಾಳತ್ವದ ಕಿವೀಸ್ ವೇಗದ ವಿಭಾಗ ಬಲಿಷ್ಠವಿದ್ದರೆ, ರಶೀದ್ ಖಾನ್, ಮುಜೀಬುರ್ ರಹ್ಮಾನ್ ನೇತೃತ್ವದ ಆಫ್ಘನ್ ತಂಡ ವಿಶ್ವ ಶ್ರೇಷ್ಠ ಸ್ಪಿನ್ ಬೌಲಿಂಗ್ ಪಡೆ ಹೊಂದಿದೆ. ಆಫ್ಘನ್ ನ ಸ್ಪಿನ್ ಬೌಲಿಂಗ್ ಕುರಿತು ಕೇನ್ ಪಡೆ ತುಸು ಎಚ್ಚರ ವಹಿಸಿದ್ದು, ದೊರೆತ ಮಾಹಿತಿ ಪ್ರಕಾರ ಟಾಸ್ ಗೆದ್ದರೆ ಕಿವೀಸ್ ಬೌಲಿಂಗ್ ಆಯ್ದುಕೊಳ್ಳುವ ಯೋಜನೆಯಲ್ಲಿದೆ. ಟಿ 20 ವಿಶ್ವಕಪ್ ನಲ್ಲಿ ಎರಡು ತಂಡಗಳು ಮುಖಾಮುಖಿಯಾಗಿವೆ. ಎರಡು ಬಾರಿಯೂ ಕಿವೀಸ್ ಗೆ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡ
ಅಫ್ಘಾನಿಸ್ತಾನ: ಹಜಾರತುಲ್ಲಾ ಜಝಾಯ್, ಮೊಹಮ್ಮದ್ ಶಹಜಾದ್ (ವಿ.ಕೀ), ರಹಮಾನುಲ್ಲಾ ಗುರ್ಬಜ್, ಗುಲ್ಬುದಿನ್ ನೈಬ್, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಂ ಜನ್ನತ್, ರಶೀದ್ ಖಾನ್, ಶರಫುದ್ದೀನ್ ಅಶ್ರಫ್/ಮುಜೀಬ್, ನವೀನ್ ಉಲ್ ಹಕ್, ಹಮಿದ್ ಹಸನ್
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೋನ್ ಕಾನ್ವೆ (ವಿ.ಕೀ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮಿಲ್ನೆ, ಟಿಮ್ ಸೌಥಿ, ಇಶ್ ಸೋದಿ, ಟ್ರೆಂಟ್ ಬೌಲ್ಟ್.
ಪಿಚ್ ರಿಪೋರ್ಟ್
ಈ ಸಲ ಅಬುಧಾಬಿ ಪಿಚ್ ನಲ್ಲಿ ಪವರ್ ಪ್ಲೇನಲ್ಲಿ ಕಡಿಮೆ ರನ್ ಹರಿದು ಬಂದಿದೆ. ಸ್ಪರ್ಧಾತ್ಮಕ ಪಿಚ್ ಇದಾಗಿದ್ದು ಟಾಸ್ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ.
- ಆರಂಭ: ಮಧ್ಯಾಹ್ನ 3.30ಕ್ಕೆ
- ಸ್ಥಳ: ಅಬುಧಾಬಿ
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ