ಸುಳ್ಯ: ಗೌಡ ಸಮುದಾಯದ ಪ್ರತಿಷ್ಠಿತ ವ್ಯಕ್ತಿ ಸುಳ್ಯದ ಅಮರ ಶಿಲ್ಪಿ ದಿವಂಗತ ಕುರುಂಜಿ ವೆಂಕಟ್ರಮಣ ಗೌಡರ ಇಬ್ಬರು ಪುತ್ರರು ಒಕ್ಕಲಿಗ ಸಂಘದ ಚುನಾವಣೆಗೆ ಸ್ಪರ್ಧಿಸಲು ಹೊರಟಿರುವುದರಿಂದ ಗೌಡ ಸಮುದಾಯದ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಗೌಡ ಸಮಾಜ ಹಿತರಕ್ಷಣಾ ವೇದಿಕೆ ಸುಳ್ಯ ಸಂಚಾಲಕ ಯತೀಶ್ ಆರ್ವಾರ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕುರುಂಜಿ ಮನೆತನದ ಕುಡಿಗಳಾದ ಡಾ. ರೇಣುಕಾ ಪ್ರಸಾದ್ ಹಾಗೂ ಡಾ ಕೆ.ವಿ ಚಿದಾನಂದ ಇಬ್ಬರು ಒಕ್ಕಲಿಗ ಸಂಘದ ಚುನಾವಣೆಗೆ ಪರಸ್ಪರ ವಿರುದ್ಧವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದು ಗೌಡ ಸಮುದಾಯದ ಒಳಗೆ ಗುಂಪುಗಾರಿಕೆ ಹಾಗೂ ಒಡಕಿಗೆ ಕಾರಣವಾಗುವ ಅಪಾಯವಿದೆ. ದಿವಂಗತ ವೆಂಕಟ್ರಮಣ ಗೌಡರು ನೀಡಿದ ಕೊಡುಗೆ ಜಾತಿ ಮತ ಮೀರಿದ್ದಾಗಿದೆ. ಅಂತಹ ದಿಗ್ಗಜನ ಮಕ್ಕಳು ಯಾರೋ ಕೆಲವು ಅವಕಾಶವಾದಿಗಳು ನಡೆಸುವ ಪ್ರಯತ್ನಕ್ಕೆ ಸೊಪ್ಪು ಹಾಕದೆ ಸಮಾಜದ ಅಭಿವೃದ್ಧಿಗೆ ಅಗತ್ಯವಾಗಿರುವ ತೀರ್ಮಾನವನ್ನು ಮಾತ್ರ ತೆಗೆದುಕೊಳ್ಳಬೇಕಿದೆ. ಈ ಮೂಲಕ ಸಮುದಾಯದ ಒಳಗೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ಪರಸ್ಪರ ಮಾತುಕತೆ ನಡೆಸಿ ಒಬ್ಬರು ಮಾತ್ರ ಸ್ಪರ್ಧೆ ಮಾಡಿ ಗೌಡ ಸಮಾಜದ ಒಗ್ಗಟ್ಟನ್ನು ತೋರಿಸಬೇಕು. ಎಲ್ಲವನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಂಡು ಗೊಂದಲ ತೆರೆ ಎಳೆಯಬೇಕು ಎಂದು ಯತೀಶ್ ಆರ್ವಾರ್ ತಿಳಿಸಿದರು.
ಗೌಡ ಸಮಾಜ ಹಿತರಕ್ಷಣಾ ಸಮಿತಿ ಸದಸ್ಯರಾದ ಮನುದೇವ ಪರಮಲೆ, ಅನೂಪ್ ಬಿಳಿಮಲೆ, ಕುಸುಮಧರ ಎ.ಟಿ, ಮಹೇಶ್ ಮೂಲೆಮಜಲು ಉಪಸ್ಥಿತರಿದ್ದರು.