ಪುತ್ತೂರು: ಈಶ್ವರ ಮಂಗಲದಲ್ಲಿ ಮೈಸೂರಿನ ಫೋಟೋಗ್ರಾಫರ್ ಜಗದೀಶ್ ಕೊಲೆ ಮಾಡಿ ಮಣ್ಣಿನಡಿಯಲ್ಲಿ ಹೊತ್ತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದಿದೆ. ಪ್ರಕರಣದಲ್ಲಿ ಸಿಲುಕಿಕೊಂಡಿರುವ ಒಬ್ಬೊಬ್ಬರೇ ಈಗ ಪೊಲೀಸರ ತನಿಖೆಯ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಐದನೇ ಆರೋಪಿ ಬಡಗನ್ನೂರ ಗ್ರಾಮದ ಅಣಿಲೆ ಜಯರಾಜ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಈತ ತಿಂಗಳಾಡಿ ಉಮೇಶ್ ರೈ ಕೊಲೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಮೈಸೂರಿನಲ್ಲಿ ಫೋಟೋ ಗ್ರಾಫರ್ ಆಗಿರುವ ಮಂಗಳೂರಿನ ಕಾವೂರು ನಿವಾಸಿ ಜಗದೀಶ್ (58) ಅವರನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿ ಪಕ್ಕದ ಮುಗುಳಿ ಗುಡ್ಡೆ ಎಂಬಲ್ಲಿ ಗುಂಡಿಯಲ್ಲಿ ಹೊತು ಹಾಕಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಡವನ್ನೂರು ಪಟ್ಲಡ್ಕದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಪತ್ನಿ ಜಯಲಕ್ಷ್ಮೀ, ಪುತ್ರ ಪ್ರಶಾಂತ್ ಹಾಗೂ ನೆರಮನೆಯ ನಿವಾಸಿ ಪಟ್ಲಡ್ಕ ಸಂಜೀವ ಗೌಡರ ಪುತ್ರ ಜೀವನ್ ಪ್ರಸಾದ್ ನನ್ನು ಕೊಲೆ ಆರೋಪದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು.
ಸುಬ್ಬಯ್ಯ ಸಂಬಂಧದಲ್ಲಿ ಕೊಲೆಯಾದ ಜಗದೀಶ್ ಅವರಿಗೆ ಮಾವನಾಗಿದ್ದ. ಇವರನ್ನು ನಂಬಿ ಕುಂಜೂರು ಪಂಜದಲ್ಲಿ 65 ಲಕ್ಷ ರೂ.ವಿನ ಜಾಗವನ್ನು ಜಗದೀಶ್ ಖರೀದಿಸಿದ್ದರು. ಈ ಜಾಗದ ಉಸ್ತುವಾರಿಯನ್ನು ಸುಬ್ಬಯ್ಯನೇ ನೋಡಿಕೊಳ್ಳುತ್ತಿದ್ದ. ಜಾಗೆಯ ದಾಖಲೆಗಳನ್ನು ಜಗದೀಶ್ ಅವರು ಮಾವ ಅನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ಬಿಟ್ಟಿದ್ದರಿಂದ ಸರಿಯಾಗಿ ರೆಕಾರ್ಡ್ ಮಾಡಿಸಿಕೊಂಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೈಸೂರಿನಲ್ಲಿದ್ದು ಅಪರೂಪಕ್ಕೊಮ್ಮೆ ಊರಿಗೆ ಬರುತ್ತಿದ್ದ ಜಗದೀಶ್ ಅವರ ಆಸ್ತಿಯನ್ನು ಸುಬ್ಬಯ್ಯ ಅವರಿಗೇ ಗೊತ್ತಿಲ್ಲದಂತೆ ಬೇರೊಬ್ಬರಿಗೆ 65 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ. ಈ ವಿಷಯ ತಿಳಿದ ಬಳಿಕ ಜಗದೀಶ್ ಕೋಪಗೊಂಡಿದ್ದಾರೆ. ನೇರವಾಗಿ ಸುಬ್ಬಯ್ಯನನ್ನು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ಓಮ್ನಿ ಕಾರಿನೊಳಗೆ ಜಗದೀಶ್ ಅವರನ್ನು ಕೂರಿಸಿಕೊಂಡು ಅಲ್ಲಿ ತಲೆಗೆ ರಾಡ್ ನಿಂದ ಹಲ್ಲೆ ಮಾಡಲಾಗಿದೆ. ಅವರು ಸತ್ತ ಬಳಿಕ ಒಂದು ದಿನ ಪಟ್ಲಡ್ಕದಲ್ಲಿ ಶೆಡ್ ವೊಂದರ ಒಳಗೆ ಇರಿಸಿ ಮರುದಿನ ಆರೋಪಿಗಳು ಅದನ್ನು ನಿರ್ಜನ ಪ್ರದೇಶದಲ್ಲಿ ಹೂತ್ತಿದ್ದಾರೆ. ಸದ್ಯ ಪೊಲೀಸರು ಹೆಣವನ್ನು ಗುಂಡಿಯಿಂದ ಹೊರ ತೆಗೆದಿದ್ದಾರೆ. ಶವವನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಪೊಲೀಸರ ಬಿರುಸಿನ ತನಿಖೆ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಶುಕ್ರವಾರವೂ ಪೊಲೀಸರು 1 ಬಸ್, 1 ಕಾರು ಹಾಗೂ 3 ಜೀಪು ಘಟನಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಬಂಧಿತ ಆರೋಪಿಗಳು ಕೂಡ ಜತೆಗಿದ್ದರು. ಒಂದಷ್ಟು ತನಿಖೆಯನ್ನೂ ಈ ವೇಳೆ ಪೊಲೀಸರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.