ರಾಂಪುರ: ಟಿ20 ಪಂದ್ಯದಲ್ಲಿ ಭಾರತ ವಿರುದ್ಧದ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯ ವಿರುದ್ಧ ದೂರು ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.
ಏನಿದು ಘಟನೆ?
ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರ ಪತ್ನಿ ರಬಿಯಾ ಶಮ್ಸಿ ಮತ್ತು ಆಕೆಯ ಕುಟುಂಬಸ್ಥರು ಪಟಾಕಿ ಸಿಡಿಸಿ, ವಾಟ್ಸಾಪ್ ಸ್ಟೇಟಸ್ ಹಾಕಿ ಸಂಭ್ರಮಿಸಿದ್ದಾರೆ ಎಂದು ಇಶಾನ್ ಮಿಯಾ ಆರೋಪಿಸಿದ್ದಾರೆ. ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ ಮತ್ತು ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯಿದೆ, 2008ರ ಸೆಕ್ಷನ್ 67 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ‘ಮದುವೆಯಾದ ಕೆಲವೇ ದಿನಗಳಲ್ಲಿ ಪತಿ-ಪತ್ನಿ ಪ್ರತ್ಯೇಕಗೊಂಡಿದ್ದಾರೆ. ಪತ್ನಿ ಆಕೆಯ ಕುಟುಂಬದವರು ಇಶಾನ್ ಮಿಯಾ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.