ನವದೆಹಲಿ: ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ತೋರಿದ ಹಾಗೂ ಸದನ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಚಳಿಗಾಲದ ಅಧಿವೇಶನದ ಉಳಿದ ಅವಧಿಯಲ್ಲಿ ಹನ್ನೆರಡು ಮಂದಿ ವಿರೋಧ ಪಕ್ಷದ ಸಂಸದರನ್ನು ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿದೆ.
ಮುಂಗಾರು ಅಧಿವೇಶನ ಆರಂಭ ಆಗುವುದಕ್ಕೂ ಒಂದು ದಿನದ ಮುಂದಷ್ಟೇ ಬಹಿರಂಗವಾಗಿದ್ದ ಪೆಗಾಸಸ್ ಹಗರಣದ ಸುದ್ದಿಯು ಮುಂಗಾರು ಅಧಿವೇಶನದಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿದ್ದವು. ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪಕ್ಕೆ ಸಂಬAಧಿಸಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಭಾರೀ ಕೂಲಹಲ ಎಬ್ಬಿಸಿದ್ದವು.
ರಾಜ್ಯಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕುರ್ಚಿಗಳನ್ನು ಎಳೆದಾಡಿ, ನಾಮಫಲಕಗಳನ್ನು ಪ್ರದರ್ಶಿಸುತ್ತಾ ಗದ್ದಲ ಸೃಷ್ಟಿಸಲಾಗಿತ್ತು. ಆ ಸಂದರ್ಭದಲ್ಲೇ ಹಲವಾರು ಮಂದಿ ಸಂಸದರನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಮಾನತು ಮಾಡಿದ್ದರು. ಮುಖ್ಯವಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಡೋಲಾ ಸೇನ್, ಮೊಹಮ್ಮದ್ ನಬೀಮುಲ್, ಅಬಿರ್ ರಂಜನ್ ಬಿಸ್ವಾಸ್, ಶಾಂತ ಛೆತ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಎಂಬ ಆರು ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈಗ ಮುಂಗಾರು ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಆರೋಪದಲ್ಲಿ ಹನ್ನೆರಡು ಮಂದಿ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಯಾರೆಲ್ಲಾ ಸಂಸದರು ಅಮಾನತು ಆಗಿದ್ದಾರೆ?
ಎಲಮರಮ್ ಕರೀಮ್ (ಸಿಪಿಎಂ), ಫುಲೋ ದೇವಿ ನೇತಮ್ (ಕಾಂಗ್ರೆಸ್), ಛಾಯಾ ವರ್ಮಾ (ಕಾಂಗ್ರೆಸ್), ರಿಪುನ್ ಬೋರಾ (ಕಾಂಗ್ರೆಸ್), ಬಿನೋಯ್ ವಿಸ್ವಾಮ್ (ಸಿಪಿಐ), ರಾಜಮಣಿ ಪಟೇಲ್ (ಕಾಂಗ್ರೆಸ್), ಡೋಲಾ ಸೇನ್ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಸೈಯದ್ ನಾಸಿರ್ ಹುಸೇನ್ (ಕಾಂಗ್ರೆಸ್), ಪ್ರಿಯಾಂಕಾ ಚತುರ್ವೇದಿ (ಶಿವಸೇನಾ), ಅನಿಲ್ ದೇಸಾಯಿ (ಶಿವಸೇನಾ) ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ (ಕಾಂಗ್ರೆಸ್).