ಬೆಂಗಳೂರು: ನದಿ, ತೊರೆ, ಹಳ್ಳ, ಕೆರೆ, ಜಲಾಶಯಗಳ ಪಾತ್ರಗಳಲ್ಲಿರುವ ಮರಳು ಗಣಿಗಾರಿಕೆ ನಡೆಸಿ, ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಪೂರೈಕೆ ಮಾಡುವ ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಗ್ರಾಮೀಣ ವಸತಿ ಯೋಜನೆಗಳಿಗೆ ಮತ್ತು ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ರಿಯಾಯ್ತಿ ದರದಲ್ಲಿ ಮರಳು ಪೂರೈಕೆ ಮಾಡಲು ನೀತಿಯಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ಪರಂಪರಾಗತವಾಗಿ ನದಿಯಲ್ಲಿ ಮುಳುಗಿ ಮರಳು ತೆಗೆಯುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ, ಇದಕ್ಕೆ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ. ಸ್ಥಳೀಯರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ರೀತಿಯಲ್ಲಿ ಮರಳು ತೆಗೆಯಬಹುದಾಗಿದೆ. ಪರಿಸರಕ್ಕೆ ಹಾನಿಯಾಗುವಂತೆ ಮರಳು ತೆಗೆಯುವುದಕ್ಕೆ ಅವಕಾಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಇದಕ್ಕಾಗಿ ‘ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021’ ಕ್ಕೆ ಸಂಪುಟ ಅನುಮೋದನೆ ನೀಡಿದೆ. ಮರಳು ಗಣಿಗಾರಿಕೆ ಮಾಡಿ ಅದರ ಸಾಗಣೆಗಾಗಿ ಮೂರು ಹಂತಗಳನ್ನು ರೂಪಿಸಲಾಗಿದೆ. ಗ್ರಾಮ ಮಟ್ಟ, ನದಿ ಪಾತ್ರ ಮತ್ತು ಸಮುದ್ರ ತೀರ ಎಂದು ಮೂರು ಹಂತಗಳನ್ನು ನಿಗದಿಪಡಿಸಲಾಗಿದೆ. ಗ್ರಾಮ ಮಟ್ಟದಲ್ಲಿ ಮಾರಲು ಪ್ರತಿ ಟನ್ಗೆ ₹300, ನದಿ ಸೇರುವ ಪಾತ್ರಗಳು ಮತ್ತು ಪಟ್ಟಣಗಳಿಗೆ ಟನ್ಗೆ ₹700 ನಿಗದಿ ಮಾಡಲಾಗಿದೆ ಎಂದರು.
ಗ್ರಾಮಪಂಚಾಯ್ತಿ ಮಟ್ಟದಲ್ಲಿ ಮರಳು ಶೇಖರಣೆ ಮಾಡಿ ಮಾರಾಟ ಮಾಡಲು ಅವಕಾಶವಿದೆ. ಜತೆಗೆ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಖನಿಜ ಟ್ರಸ್ನಿಂದ ಶೇ 2 ರಷ್ಟು ನಿಧಿ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ. ಸರ್ಕಾರಕ್ಕೆ ಬರುವ ಶೇ 50 ರಷ್ಟು ರಾಯಲ್ಟಿಯಲ್ಲಿ ಶೇ 25 ಆಯಾ ಪಂಚಾಯಿತಿಗಳಿಗೆ ನೀಡಲಾಗುವುದು. ಸರ್ಕಾರದ ವಸತಿ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳು ಮತ್ತು ಬಡವರಿಗೆ ರಿಯಾಯ್ತಿ ದರದಲ್ಲಿ ಮರಳು ನೀಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯಿತಿಗಳಿಗೇ ನೀಡಲಾಗಿದೆ ಎಂದು ಹೇಳಿದರು.