ಪಾಲಕ್ಕಾಡ್: ಕೇರಳದಲ್ಲಿ ಇತ್ತೀಚೆಗೆ ನಡೆದ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆಗೆ ಭಯೋತ್ಪಾದಕರ ನಂಟಿದೆ ಎಂದು ಗುರುವಾರ ಆರೋಪಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್)ವು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ನವೆಂಬರ್ 15 ರಂದು ಪಾಲಕ್ಕಾಡ್ ಜಿಲ್ಲೆಯಲ್ಲಿ ಹತ್ಯೆಗೀಡಾದ ಸಂಜಿತ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ ಆರ್ ಎಸ್ ಎಸ್ ನ ಸಹ ಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ಡಾ.ಮನಮೋಹನ್ ವೈದ್ಯ ಈ ವಿಷಯ ತಿಳಿಸಿದರು.
(ಕೇರಳದ) ಸಿಪಿಐ(ಎಂ) ಸರ್ಕಾರದಿಂದ ನ್ಯಾಯ ಸಿಗದೇ ಹೋದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಸಂಜಿತ್ ಹತ್ಯೆಯ ವಿಸ್ತೃತ ಎನ್ಐಎ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಹತ್ಯೆಯಲ್ಲಿ ಭಾಗಿಯಾಗಿದ್ದವರಿಗೆ ಭಯೋತ್ಪಾದಕರ ನಂಟಿದೆ. ಇದು ಪೂರ್ವ ನಿಯೋಜಿತ ಕೊಲೆ. ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯ ಎಂದು ಮಾಧ್ಯಮಗಳಿಗೆ ತಿಳಿಸಿದರು.
ನಾವು ಮೃತರ ಕುಟುಂಬದ ಪರವಾಗಿ ದೃಢವಾಗಿ ನಿಲ್ಲುತ್ತೇವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕೇರಳದ ಸರ್ಕಾರವು ಇಂತಹ ಉದ್ದೇಶಿತ ಹತ್ಯೆಗಳನ್ನು ತಡೆಯಲು ವಿಫಲವಾಗಿರುವುದು ಅತ್ಯಂತ ದಯನೀಯ ಎಂದು ವೈದ್ಯ ಬೇಸರ ವ್ಯಕ್ತಪಡಿಸಿದರು. ಸ್ವಯಂಸೇವಕರ ಹತ್ಯೆಯಲ್ಲಿ ಆಡಳಿತಾರೂಢ ಸಿಪಿಐ (ಎಂ) ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವೆ ರಹಸ್ಯ ಹೊಂದಾಣಿಕೆ ಇದೆ. ಇದರ ಬಗ್ಗೆ ನ್ಯಾಯಯುತ ತನಿಖೆ ನಡೆಯಬೇಕು ಎಂದೂ ವೈದ್ಯ ಒತ್ತಾಯಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ಕ್ಕೆ ಇರಬಹುದಾದ ಭಯೋತ್ಪಾದಕ ಸಂಪರ್ಕಗಳು ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಆರ್ಎಸ್ಎಸ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.