ಚಿಕ್ಕಮಗಳೂರು: ಕನ್ನಡ ಶಾಲೆಗಳು ಉಳಿಬೇಕು ಅನ್ನುವ ಕೂಗು ಹೆಚ್ಚುತ್ತಿದೆ. ಆದರೆ ಇನ್ನೊಂದು ಕಡೆ ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಇಲ್ಲದೆ ರಾಜ್ಯದ ಹಲವು ಕಡೆ ಶಾಲೆಗಳನ್ನೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಖಾಸಗಿ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದೇ ಇರುವುದರಿಂದ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 2014 ರಿಂದ ಒಟ್ಟು 87 ಕನ್ನಡ ಶಾಲೆಗಳು ಬೀಗ ಹಾಕಿಕೊಂಡಿವೆ.
ಇದೀಗ ಈ ವರ್ಷ ಹೊಸದಾಗಿ 3 ಶಾಲೆಗಳು ಬೀಗ ಹಾಕಿಕೊಂಡಿವೆ. ಸರಕಾರ ಒಂದು ಕಡೆ ಖಾಸಗಿ ಶಾಲೆಗಳಿಗೆ ದುಡ್ಡು ಮಾಡಲು ಸಕಲ ವ್ಯವಸ್ಥೆ ಮಾಡಿಕೊಟ್ಟು ಇನ್ನೊಂದು ಕಡೆ ತಮ್ಮ ಹಿಡಿತದಲ್ಲಿರುವ ಸರಕಾರಿ ಶಾಲೆಗಳಿಗೆ ಬೀಗ ಜಡಿಯುತ್ತಿರುವುದು ಆತಂಕದ ಸ್ಥಿತಿಯಾಗಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಸರಕಾರಿ ಶಾಲೆ ಶಿಕ್ಷಕರು ಮಕ್ಕಳ ಹಾಜರಾತಿ ಇಲ್ಲದೆ ಕೆಲಸ ಕಳೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.