ಬೆಳ್ತಂಗಡಿ: ರಸ್ತೆ ಬದಿಯಲ್ಲಿ 5 ಗ್ರೆನೇಡ್ ಪತ್ತೆಯಾದ ಘಟನೆ ಶನಿವಾರ ಸಂಜೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ನಿವೃತ್ತಿ ಹೊಂದಿದ್ದ ಇಳಂತಿಲ ಗ್ರಾಮದ ನಿವಾಸಿ ಜಯಕುಮಾರ್ ಪೂಜಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದ್ದು , ಅದರಲ್ಲಿ ಒಂದು ಗ್ರನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೈನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿದ್ದು, ಜಯಕುಮಾರ್ ಪೂಜಾರಿ ಅವರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿರುವುದರಿಂದ ಈ ವಸ್ತುಗಳು ಗ್ರೈನೇಡ್ ಎಂಬುದಾಗಿ ಅವರಿಗೆ ತಿಳಿದುಬಂದಿದೆ. ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಅವರು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದು ಯಾರೋ ಅಪರಿಚಿತ ದುಷ್ಕರ್ಮಿಗಳು ಬರುವ ದಾರಿಯಲ್ಲಿ ಹಾಕಿದ್ದು, ಕೃತ್ಯ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.