ಬೆಳ್ತಂಗಡಿ: ನಿಮ್ಮ ಉಳಿತಾಯ ಖಾತೆಗೆ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡಿ. ಇಲ್ಲವಾದರೆ ಖಾತೆ ಬ್ಲಾಕ್ ಮಾಡಲಾಗುವುದು. ಬ್ಯಾಂಕ್ ಖಾತೆಯ ವೆಬ್ಸೈಟ್ ಲಿಂಕ್ನಲ್ಲಿ ಸುಲಭವಾಗಿ ಪಾನ್ ನಂಬರ್ ಅನ್ನು ನೀವಾಗಿಯೇ ದಾಖಲಿಸಬಹುದು ಎನ್ನುವ ಸಂದೇಶವನ್ನು ನಂಬಿ ವಂಚಕರು ಕಳುಹಿಸಿದ್ದ ನಕಲಿ ವೆಬ್ಸೈಟ್ನಲ್ಲಿ ಬ್ಯಾಂಕ್ ಖಾತೆಯ ವಿವರ ದಾಖಲಿಸುತ್ತಿದ್ದಂತೆಯೇ ಖಾತೆಯಲ್ಲಿದ್ದ 55,620 ರೂ. ಹಣ ವಿತ್ ಡ್ರಾ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಏನಿದು ಘಟನೆ?
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಕೊಡಂಗೆ ಮನೆ ನಿವಾಸಿ ಆಟೋ ರಿಕ್ಷಾಚಾಲಕ ಅಬ್ದುಲ್ ರಹಿಮಾನ್ ಹಣ ಕಳೆದುಕೊಂಡು ಮೋಸ ಹೋದವರು. ಅವರ ಮೊಬೈಲ್ಗೆ ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಕಳುಹಿಸಲಾಗಿದೆ ಎಂದು ಬಿಂಬಿಸಲಾದ ಸಂದೇಶದಲ್ಲಿ ನಿಮ್ಮ ಉಳಿತಾಯ ಖಾತೆಗೆ ಕೂಡಲೇ ಪಾನ್ ನಂಬರ್ ಅನ್ನು ಜೋಡಿಸಿ. ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಪಾನ್ ನಂಬರ್ ಅನ್ನು ಖಾತೆಗೆ ಜೋಡಿಸಲು ನಮ್ಮ ವೆಬ್ಸೈಟ್ ಲಿಂಕ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿ ಅವರು ಮೋಸ ಹೋಗಿದ್ದಾರೆ ಎಂದು ತಿಳಿದು ಬಂದಿದೆ.