ಸುಳ್ಯ: ಗುತ್ತಿಗಾರಿನ ಬಾಲಕನಿಗೆ ಹಲ್ಲೆ ಮಾಡಿದ ಆರೋಪಿಗಳಿಗೆ ಸುಳ್ಯ ನ್ಯಾಯಾಲಯ ಜಾಮೀನು ನೀಡಿದೆ.
ಅಡಿಕೆ ಕದ್ದ ನೆಪದಲ್ಲಿ ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶ ಕೇಳಿಬಂದಿದ್ದರಿಂದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಮೊದಲಿಗೆ ಸುಮೊಟೊ ಕೇಸು ದಾಖಲಿಸಿದ್ದರು. ಆನಂತರ, ಸ್ವತಃ ಬಾಲಕನೇ ಹೆತ್ತವರ ಜೊತೆಗೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದ. ಗುತ್ತಿಗಾರಿನ ಕಡ್ತಲ್ ಕಜೆ ಎಂಬಲ್ಲಿ ಅ.27ರಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಹಣ್ಣಡಿಕೆಯನ್ನು ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದ ಬಾಲಕನನ್ನು, ಆತ ಕದ್ದು ತಂದ ನೆಪದಲ್ಲಿ ಅಡ್ಡಗಟ್ಟಿದ ಯುವಕರು ಹಲ್ಲೆ ನಡೆಸಿದ್ದರು. ಅಲ್ಲದೆ, ದೊಣ್ಣೆಯಲ್ಲಿ ಹಲ್ಲೆ ನಡೆಸಿದ ವಿಡಿಯೋವನ್ನು ಅವರೇ ಮಾಡಿಕೊಂಡು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಹಲ್ಲೆ ನಡೆಸಿದವರು ಸ್ಥಳೀಯವಾಗಿ ಸಂಘಟನೆಯಲ್ಲಿ ಗುರುತಿಸಿಕೊಂಡವರಾಗಿದ್ದು, ಅಡಿಕೆ ಕದ್ದ ಬಾಲಕನಿಗೆ ಗೂಸಾ ನೀಡಿದ್ದಾಗಿ ವಿಡಿಯೋ ಹಂಚಿದ್ದರು.
ವಿಡಿಯೋದಲ್ಲಿ ಬಾಲಕ ನಾನು ಅಡಿಕೆ ಕದ್ದಿಲ್ಲ ಎಂದು ಅಂಗಲಾಚುತ್ತಿದ್ದರೂ, ಆತನ ಬಳಿ ಒತ್ತಾಯಪೂರ್ವಕವಾಗಿ ಹೇಳೆಂದು ಬೆದರಿಸುತ್ತಿರುವುದು ಕೂಡ ಗೊತ್ತಾಗುತ್ತದೆ. ಒಂದು ವೇಳೆ ಆತ ಕದ್ದಿದ್ದೇ ಹೌದಾದರೆ ಕಾನೂನು ಕ್ರಮಕ್ಕೆ ಇಲಾಖೆಗಳಿವೆ. ನಡುರಸ್ತೆಯಲ್ಲಿ ಆತನನ್ನು ಬೆದರಿಸಲು ಕಾನೂನು ಕೈಗೆ ಕೊಟ್ಟವರು ಯಾರೆಂಬ ಪ್ರಶ್ನೆ ಸಾರ್ವಜನಿಕರದ್ದು. ಒಟ್ಟಾರೆ ಪ್ರಕರಣ ಕುರಿತಂತೆ ಕೋರ್ಟ್ ಜಾಮೀನು ನೀಡಿದ್ದು, ಇನ್ನೇನು ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.