-ಬಾಲಚಂದ್ರ ಕೋಟೆ, ಕ್ರೀಡಾ ಪತ್ರಕರ್ತ
ಎಬಿಡಿ ಹೊಡಿಬಡಿ ಇನ್ನು ಕಾಣಲಾರದು. ಇದು ಕಹಿ ಆದರೂ ಸತ್ಯ. ಇನ್ನು ಮುಂದೆ ಆರ್ಸಿಬಿ ಆಟ ಏತಕ್ಕಾಗಿ ನೋಡಲಿ ಎಂದು ಅನಿಸುತ್ತಿದೆ. ಅವರ ನಿವೃತ್ತಿಯಿಂದ ಇಡಿ ಐಪಿಎಲ್ ಟೂರ್ನಿಯೇ ಕಳೆಗುಂದಲಿವೆ ಎಂದರೂ ತಪ್ಪಾಗಲಾರದು.
ಬಹುತೇಕ ಕ್ರಿಕೆಟ್ ಅಭಿಮಾನಿಗಳು ಅದರಲ್ಲಿಯೂ ಆರ್ಸಿಬಿ ಆಭಿಮಾನಿಗಳು ಪ್ರತಿ ಪಂದ್ಯವನ್ನು ಅದೆಷ್ಟು ಬಿಡುವಿಲ್ಲದ ಕೆಲಸದ ನಡುವೆಯೂ ನೋಡುತ್ತಾರೆ ಎಂದರೆ ಅದಕ್ಕೆ ಕಾರಣ ಮಿಸ್ಟರ್ 360. ತಮ್ಮ ವೈವಿಧ್ಯಮಯ,ವಿಭಿನ್ನ ಹೊಡೆತಗಳಿಂದಲೇ ವಿಶ್ವದ ನಾನಾ ಮೂಲೆಗಳಲ್ಲಿಯೂ ಬೃಹತ್ ಅಭಿಮಾನಿ ಬಳಗವನ್ನು ವಿಲಿಯರ್ಸ್ ಹೊಂದಿದ್ದು, ವಿಶ್ವದ ಅತಿ ಹೆಚ್ಚು ಫ್ಯಾನ್ ಫಾಲೊವಿಂಗ್ ಸಾಲಿನಲ್ಲಿ ಅಗ್ರ 5ರ ಸಾಲಿನಲ್ಲಿ ಇದ್ದಾರೆ.
2004ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಡಿವಿಲಿಯರ್ಸ್ 2005ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದರು. 2006ರಲ್ಲಿ ಟಿ20 ಗೇ ಪದಾರ್ಪಣೆ ಮಾಡಿ ಬಳಿಕ,2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೂಲಕ ಐಪಿಎಲ್ ಎಂಟ್ರಿ ಆದರು.
ವಿಲಿಯರ್ಸ್ ಒಟ್ಟು 114 ಟೆಸ್ಟ್ ಪಂದ್ಯವಾಡಿದ್ದು 50.66 ಸರಾಸರಿ ಸಹಿತ 22 ಶತಕ ಹಾಗೂ 46 ಅರ್ಥ ಶತಕ ಸಿಡಿಸುವುದರೊಂದಿಗೆ 8,765 ರನ್ ಗಳಿಸಿದ್ದಾರೆ. ಏಕದಿನಲ್ಲಿ 53.50 ಸರಾಸರಿ ಬ್ಯಾಟಿಂಗ್ ನಡೆಸಿ 25 ಶತಕ ಹಾಗೂ 53 ಅರ್ಧಶತಕ ಸಹಿತ 9,577 ರನ್ ಬಾರಿಸಿದ್ದಾರೆ. ಟಿ20 ಮಾದರಿಯಲ್ಲಿ 1,672 ರನ್ ಗಳಿಸಿದ್ದು,10 ಅರ್ಥಶತಕ ಬಾರಿಸಿದ್ದಾರೆ. ಇದರೊಂದಿಗೆ 2010,2015 ಹಾಗೂ 2017ರಲ್ಲಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ.
2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊಟ್ಟ ಮೊದಲ ಬಾರಿ ಪ್ರತಿನಿಧಿಸಿದ್ದ ಎಬಿಡಿ, ಒಟ್ಟು 10 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪರ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 184 ಐಪಿಎಲ್ ಪಂದ್ಯಗಳಾಡಿರುವ ಎಬಿ ಡಿವಿಲಿಯರ್ಸ್, 5,162 ರನ್ ಗಳನ್ನು ಸಿಡಿಸಿದ್ದಾರೆ. ಆರ್ ಸಿಬಿ ಇತಿಹಾಸದಲ್ಲಿಯೇ ವಿರಾಟ್ ಕೊಹ್ಲಿ ಬಳಿಕ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್ ಮನ್ ಎಂಬ ದಾಖಲೆ ಕೂಡ ಆಫ್ರಿಕಾ ಮಾಜಿ ನಾಯಕನ ಹೆಸರಿನಲ್ಲಿದೆ. 2015ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 133* ರನ್ ಹಾಗೂ 2016ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಅಜೇಯ 129 ರನ್ ಸಿಡಿಸಿದ್ದರು. ಈ ಎರಡೂ ಇನಿಂಗ್ಸ್ ಗಳು ಎಬಿಡಿ ಪಾಲಿಗೆ ಅತ್ಯಂತ ಶ್ರೇಷ್ಠ ಐಪಿಎಲ್ ಇನಿಂಗ್ಸ್ ಗಳಾಗಿವೆ.
ಭಾರತದಲ್ಲಿಯೇ ಹೆಚ್ಚು ಅಭಿಮಾನಿ ಬಳಗ
ಹೌದು.ಆರ್ಸಿಬಿ ಪಂದ್ಯ ಎಂದರೆ ಸಾಕು ಜನರು ಹುಚ್ಚೆದ್ದು ಕುಣಿದು ಎಬಿಡಿ ಎಬಿಡಿ ಎಂದು ಜಯಕಾರ ಹಾಕುತ್ತಾರೆ.ಸ್ವಂತ ದೇಶ ದಕ್ಷಿಣ ಆಫ್ರೀಕಾಗಿಂತ ಹೆಚ್ಚು ಭಾರತದಲ್ಲಿಯೇ ಈತನಿಗೆ ಅಭಿಮಾನಿಗಳಿದ್ದರು ಎಂಬುದು ಸೋಜಿಗವೆ. ಇದೀಗ ಐಪಿಎಲ್ ಗೂ ಲಭ್ಯರಿಲ್ಲದಿದ್ದು ಅಪಾರ ಅಭಿಮಾನಿಗಳಿಗೆ ನಿರಾಸೆಯಂತೂ ಖಂಡಿತ.