ಸುಳ್ಯ: ಪೊಲೀಸರಿಗೆ ಪ್ರತಿ ದಿನ ಖಾಕಿ ಬಟ್ಟೆಯೇ ಸಂಗಾತಿ. ಬಹುತೇಕ ವೃತ್ತಿ ಜೀವನದಲ್ಲಿ ಬಣ್ಣ ಬಣ್ಣದ ಧಿರಿಸು ಅವರಿಗೆ ಕನಸಿನ ಮಾತೇ ಸರಿ. ಕಷ್ಟವೋ ಸುಖವೋ ಬಂದಿದ್ದೆಲ್ಲ ಬರಲಿ ಅನ್ನುತ್ತಾ ಬಿಸಿಲಿನ ಝಳಕ್ಕೆ ಮೈ ಒಡ್ಡುತ್ತಾ ತಲೆ ನೋವಿನ ಪ್ರಕರಣಗಳನ್ನು ಭೇದಿಸುತ್ತಾ ದಿನ ನಿತ್ಯದ ಜಂಜಾಟದಲ್ಲಿ ಒದ್ದಾಡುತ್ತಿರುತ್ತಾರೆ. ಅಂತಹ ಪೊಲೀಸರಿಗೆ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿದರೆ ಹೇಗಿರುತ್ತೆ? ಅನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬಜಪೆ ಪೊಲೀಸ್ ಠಾಣೆ ಗುರುವಾರ ಸಾಕ್ಷಿಯಾಯಿತು.
ನಾಡಿನೆಲ್ಲೆಡೆ ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದರೆ, ಸುಳ್ಯ ಹಾಗೂ ಬಜಪೆ ಠಾಣೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯುಧ ಪೂಜೆ ನಡೆಸಲಾಯಿತು. ದಿನಂಪ್ರತಿ ಖಾಕಿ ಬಟ್ಟೆಯಲ್ಲಿ ಜಬರ್ದಸ್ತ್ ಆಗಿ ಕಾಣುತ್ತಿದ್ದ ಪೊಲೀಸರು ಇಂದು ಸಾಂಪ್ರದಾಯಿಕ ಶೈಲಿಯ ಧಿರಿಸನ್ನು ತೊಟ್ಟು ಪಂಚೆ, ಶರ್ಟ್ ನಲ್ಲಿ ಮಿಂಚಿದರು. ಠಾಣೆಯಲ್ಲಿ ಆಯುಧಗಳಿಗೆ ಪೂಜೆ ನಡೆಸಿದರು. ಬಳಿಕ ಪೊಲೀಸ್ ವಾಹನಗಳಿಗೆ ಪೂಜೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು.