ಸುಳ್ಯ : ಕಳೆದ ಬಾರಿ ಜಯನಗರ ನಾಗಬ್ರಹ್ಮ ಆದಿಮೊಗೇರ್ಕಳ ದೇವಸ್ಥಾನದಲ್ಲಿ ನಡೆದ ನೇಮೋತ್ಸವಕ್ಕೆ ಸಂಗ್ರಹವಾದ ಹಣದ ಲೆಕ್ಕಾಚಾರವನ್ನು ಆಡಳಿತ ಸಮಿತಿಯವರಿಗೆ ನೇಮೋತ್ಸವ ಸಮಿತಿ ಹಸ್ತಾಂತರಿಸಿದೆ. ಈಗ ಕೆಲವರು ನೇಮೋತ್ಸವ ಸಮಿತಿ ಮೇಲೆ ಹಣ ದುರುಪಯೋಗದ ಆರೋಪ ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದ ವಿಷಯ ಎಂದು ನೇಮೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಜಯನಗರ ಹೇಳಿದ್ದಾರೆ.
ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನೇಮೋತ್ಸವ ಕ್ಕೆ 2 ಲಕ್ಷದ 80 ಸಾವಿರ ಸಂಗ್ರಹವಾಗಿತ್ತು. ಅದರಲ್ಲಿ ನೇಮೋತ್ಸವ ಖರ್ಚು, ಮೇಲ್ಚಾವಣಿ ದುರಸ್ತಿ, ಸಾರ್ವಜನಿಕ ಶೌಚಾಲಯ ಅಡಿಪಾಯ ಸೇರಿ ಖರ್ಚು ಕಳೆದು ಈಗ ರೂ.52 ಸಾವಿರ ಉಳಿಕೆಯಾಗಿದೆ. ಇದರ ಲೆಕ್ಕಾಚಾರವನ್ನು ನಾವು ಆಡಳಿತ ಸಮಿತಿಗೆ ಹಸ್ತಾಂತರ ಮಾಡಿದ್ದೇವೆ. ಆದರೆ ಹಣ ಮಾತ್ರ ಬ್ಯಾಂಕಿನ ಮೂಲಕವೇ ವರ್ಗಾಯಿಸಬೇಕೆಂಬ ಕಾರಣಕ್ಕೆ ನಮ್ಮಲ್ಲಿ ಇದೆ. ಆಡಳಿತ ಸಮಿತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದರು. ಎಲ್ಲದಕ್ಕೂ ಲೆಕ್ಕಾಚಾರ ಇದ್ದರೂ ಕೆಲವರು ನೇಮೋತ್ಸವ ಸಮಿತಿಯ ಮೇಲೆ ದುರುಪಯೋಗ ದ ಆರೋಪ ಮಾಡುತ್ತಿರುವುದು ಬೇಸರ ತರಿಸಿದೆ. ದೇವಸ್ಥಾನ ಕ್ಕೆ ಬರುವ ಭಕ್ತರಿಗೆ ಗೊಂದಲ ಆಗಬಾರದೆಂಬ ಕಾರಣಕ್ಕೆ ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಕೃಷ್ಣಮೂರ್ತಿ, ಸದಸ್ಯರಾದ ರಮೇಶ್ ಪೂಜಾರಿ, ದೀಕ್ಷಿತ್ ಜಯನಗರ ಉಪಸ್ಥಿತರಿದ್ದರು.