ಸಂಪಾಜೆ/ಕೊಯನಾಡು: ಒಂಟಿ ಆನೆಯೊಂದು ಸಂಪಾಜೆ, ಕೊಯನಾಡು ಭಾಗದ ಜನರ ನಿದ್ರೆ ಕೆಡಿಸಿದೆ. ರಾತ್ರಿ ಹೊಂಚು ಹಾಕಿ ರೈತರ ತೋಟಗಳಿಗೆ ನುಗ್ಗುವ ಗಜರಾಜ ಬಾಳೆ, ಅಡಿಕೆ, ತೆಂಗು, ಕೊಕ್ಕೋ ಸೇರಿದಂತೆ ರೈತರ ಕೃಷಿಗಳನ್ನು ನಾಶ ಮಾಡುತ್ತಿದೆ. ಕಷ್ಟಪಟ್ಟು ಬೆಳೆದ ರೈತ ಈಗ ಕಂಗಾಲಾಗಿದ್ದಾನೆ.
ಆನೆಯನ್ನು ಹಿಡಿಯುವ ಕೆಲಸಕ್ಕೆ ಇದುವರೆಗೆ ಅರಣ್ಯಾಧಿಕಾರಿಗಳು ಗಮನ ಹರಿಸಿಲ್ಲ ಎಂದು ಊರಿನವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ರಾತ್ರಿ ಸಂಪಾಜೆ ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಆನೆ ದಾಟಿಕೊಂಡು ಪಕ್ಕದ ಕೃಷಿ ಜಮೀನಿಗೆ ನುಗ್ಗಿದೆ. ಈ ವಿಡಿಯೋ ವೈರಲ್ ಆಗಿದೆ. ಕಡೆಪಾಲದ ರಶೀದ್ ಆಲಿಗುಡ್ಡೆಯವರ ತೋಟಕ್ಕೂ ನುಗ್ಗಿ ಬಾಳೆ ಕೃಷಿಯನ್ನು ಸರ್ವ ನಾಶ ಮಾಡಿದೆ. ಇದೇ ರೀತಿ ಕೊಯನಾಡಿನಲ್ಲೂ ಅನೇಕ ದೂರುಗಳು ಕೇಳಿ ಬಂದಿದೆ. ರಾತ್ರಿಯಾಯಿತೆಂದರೆ ಆನೆಗಳನ್ನು ಓಡಿಸುವ ಕೆಲಸವೇ ಇಲ್ಲಿನ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಸಾಕಿದ ಆನೆಯನ್ನು ಯಾರೋ ರಾತ್ರಿ ತಂದು ಇಲ್ಲಿ ಬಿಟ್ಟಿದ್ದಾರೆ. ಕಾಡಾನೆ ಅಲ್ಲ ಅದು ಎಂದು ಊರಿನ ಕೆಲವು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜವಾಬ್ದಾರಿ ಇರುವವರು ಆನೆ ದಾಳಿಯನ್ನು ನಿಯಂತ್ರಿಸಿ ಊರಿನ ರೈತರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಬೇಕಿದೆ.