ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ನಲ್ಲಿ ಉದ್ಯಮಿಯೊಬ್ಬರು ಹಾರಿಸಿದ ಗುಂಡು ತನ್ನ ಕೆಲಸದಾಳು ಬದಲಾಗಿ ಮಗನಿಗೇ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ಪುತ್ರ ಇಂದು ಮೃತಪಟ್ಟಿದ್ದಾನೆ. ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ.ಲಿ. ನ ಮಾಲೀಕ ರಾಜೇಶ್ ಪ್ರಭು ಅವರ ಪುತ್ರ ಸುಧೀಂದ್ರ ಪ್ರಭು(16) ಮೃತ ಬಾಲಕ.
ಏನಿದು ಪ್ರಕರಣ?
ವೇತನದ ವಿಚಾರಕ್ಕೆ ಕಳೆದ ಕೆಲವು ದಿನಗಳ ಹಿಂದೆ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಬಳಿ ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆದಿದೆ. ಆಗ ರಾಜೇಶ್ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದರು.
ರಾಜೇಶ್ ಪ್ರಭು ತನ್ನ ಸಿಬ್ಬಂದಿಗಳ ಕಡೆಗೆ ಗುರಿಯಾಗಿಸಿ ಪಿಸ್ತೂಲ್ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಗುಂಡು ಅವರ ಪುತ್ರ ಸುಧೀಂದ್ರನಿಗೇ ತಗುಲಿತ್ತು. ಎಡಗಣ್ಣಿನ ಹತ್ತಿರದಿಂದ ಹಾದುಹೋಗಿದ್ದ ಗುಂಡು ತಲೆಯ ಒಳಭಾಗದಲ್ಲಿ 7-8 ಇಂಚು ಆಳಕ್ಕಿಳಿದಿತ್ತು. ಕೂಡಲೇ ಪುತ್ರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಂಡು ತಗುಲಿದ ತೀವ್ರತೆಗೆ ಸುಧೀಂದ್ರನ ಮೆದುಳು ನಿಷ್ಕ್ರೀಯವಾಗಿತ್ತು. ಆದರೆ ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಆರೋಪಿ ರಾಜೇಶ್ ಪ್ರಭುವನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಶೂಟೌಟ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ.