ಬೆಳ್ಳಾರೆ: ತಮಿಳುನಾಡಿನಲ್ಲಿ ಮಕ್ಕಳಿಬ್ಬರು ಸೇರಿಕೊಂಡು ಶಾಲೆಗೆ ಸಮೀಪವಿದ್ದ ಮದ್ಯದ ಅಂಗಡಿಯನ್ನು ಮುಚ್ಚಿಸಿ ಸುದ್ದಿಯಾಗಿದ್ದರು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಸದ್ದು ಮಾಡಿದ್ದಾರೆ. ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದಾರೆ. ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದೆ.
ಏನಿದು ಘಟನೆ?
ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ ಮಕ್ಕಳಿಗೆ ನಿರಾಸೆ ಕಾದಿತ್ತು. ಕೆಸರು ತುಂಬಿದ ಈ ರಸ್ತೆಯಲ್ಲಿ ನಾವು ಹೋಗುವುದಾದರೂ ಹೇಗೆ ಎಂಬ ಚಿಂತೆ ಈ ಪುಟಾಣಿಗಳಿಗೆ ಕಾಡಿತು. ಯಾರಿಗೂ ಏನೂ ಹೇಳಿ ಪ್ರಯೋಜನವಿಲ್ಲ ಎಂದು ನಿರ್ಧರಿಸಿ ತಾವೆ ಹಾರೆ ಹಿಡಿದು ಸರಿಪಡಿಸುವ ಕೆಲಸ ಮಾಡಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಕೆಲಸವನ್ನು ಮಾಡಿದ್ದು ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2 ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರು ಬದಿಗೆ ಸರಿಸಿ ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ. ಈ ರಸ್ತೆಯ ಮೇಲೆ ಈ ಪುಟಾಣಿಗಳಿಗಿರುವ ಪ್ರೀತಿ, ಅಭಿವೃದ್ಧಿಯ ಹೊಣೆ ಹೊರಬೇಕಾದ ದೊಡ್ಡವರಿಗೆ ಯಾಕಿಲ್ಲ ಎಂಬ ಪ್ರಶ್ನೆ ಮೂಡಿದೆ.