ಸುಳ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸಂಪಾಜೆಯ ಬಾಲಕಿ ಜೆಮೀನಾ ಕೆ ಜಾನ್ ಇಂದು ನಿಧನಳಾಗಿದ್ದಾಳೆ.
ಜನಪರ ಹೋರಾಟಗಾರ ಕಾಂಟ್ರಾಕ್ಟರ್ ಕೆ.ಪಿ.ಜಾನಿಯವರ ಮಗಳು ಜೆಮೀನಾ ಅಪರೂಪದ ಮಾರಣಾಂತಿಕ ವೈರಸ್ಗೆ ತುತ್ತಾಗಿದ್ದಳು. ಮಗುವನ್ನು ಬದುಕಿಸುವುದಕ್ಕೆ ಕುಟುಂಬ ಹರಸಾಹಸ ನಡೆಸಿತ್ತು. ಹಿತೈಷಿ, ಸ್ನೇಹಿತರ, ಬಂಧು ಬಳಗದ ಪ್ರಾರ್ಥನೆ ಫಲಿಸಲಿಲ್ಲ. ಐದು ವರ್ಷದ ಜೆಮೀನಾ ಗುರುವಾರ ಮೃತಪಟ್ಟಿದ್ದಾಳೆ ಎಂದು ಸ್ನೇಹಿತ ಮೂಲಗಳು ತಿಳಿಸಿವೆ.
ಏನಾಗಿತ್ತು?
ಜೆಮೀನಾ ಕೆ ಜಾನ್ ಅಪರೂಪದ ಎಪ್ಸ್ಟೀನ್ ಬಾರ್ ವೈರಸ್ (ಇಬಿವಿ) ಸೋಂಕು, ಹಿಮೋಫಾಗೊಸಿಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (ಎಚ್ಎಲ್ಎಚ್) ಸಿಂಡ್ರೋಮ್ ಮತ್ತು ತುರ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ನಿಂದ ಬಳಲುತ್ತಿದ್ದರು. ಈ ಮಗುವಿನ ಜೀವ ಉಳಿಸಲು ಕುಟುಂಬ ಸಾಕಷ್ಟು ಖರ್ಚು ಮಾಡಿತ್ತು. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಸುಮಾರು 50,00,000 ರೂ. ಬೇಕಾಗಿತ್ತು. ಎಲ್ಲವನ್ನು ವ್ಯವಸ್ಥೆ ಮಾಡಿದ್ದರೂ ಮಗು ಬದುಕುಳಿಯಲಿಲ್ಲ, ಜೆಮೀನಾ ಮರಳಿ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಮಗುವಿನ ತಂದೆ ಕೆ.ಪಿ.ಜಾನಿಯವರು ಮನೆ ಕಟ್ಟುವ ಕೆಲಸ ಮಾಡುವ ಸಣ್ಣ ಗುತ್ತಿಗೆದಾರರು. ಕಟ್ಟಡ ಕಾರ್ಮಿಕರ ಪರ ಹೋರಾಟ ನಡೆಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.