ಬೆಂಗಳೂರು: ಗೋಳಿತೊಟ್ಟು ಗ್ರಾಮದ ದಲಿತ ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ)ವರ್ಗಾವಣೆಗೆ ಕಾಣದ ಕೈಗಳು ನಡೆಸುತ್ತಿರುವ ಪ್ರಯತ್ನದ ಕುರಿತು ನ್ಯೂಸ್ ನಾಟೌಟ್ ಕನ್ನಡ ವೆಬ್ಸೈಟ್ ಮಾಡಿರುವ ವರದಿಗೆ ಸಂಸ್ಥೆ ಈಗಲೂ ಬದ್ಧವಾಗಿದೆ. ಸುಳ್ಳು ಸುದ್ದಿ ಅನ್ನುವ ರೀತಿಯಲ್ಲಿ ಇದನ್ನು ಖಾಸಗಿ ಯೂ ಟ್ಯೂಬ್ ಚಾನಲ್ ನಲ್ಲಿ ವೈಭವೀಕರಿಸಿ ನ್ಯೂಸ್ ನಾಟೌಟ್ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಸಿದೆ. ವ್ಯಕ್ತಿಯ ಪೂರ್ವಾಪರ ಮಾಹಿತಿ, ಆತನಾಡಿರುವ ಮಾತುಗಳ ಸತ್ಯಾಸತ್ಯತೆ ತಿಳಿಯದೆ ಗ್ರೌಂಡ್ ರಿಪೋರ್ಟ್ ಮಾಡದೆ ನಮ್ಮ ವರದಿಯ ಸ್ಕ್ರೀನ್ ಶಾಟ್ ಅನ್ನು ತಮ್ಮ ನೇರ ಪ್ರಸಾರದಲ್ಲಿ ಬಳಸಿಕೊಂಡು ನಮ್ಮ ಸಂಸ್ಥೆಗೆ ಬಿಟ್ಟಿ ಪ್ರಚಾರ ನೀಡಿದ್ದಾರೆ.
ಏನೇ ಇರಲಿ ಒಟ್ಟಾರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಆಡಿಯೋ ದಾಖಲೆಗಳು ನ್ಯೂಸ್ ನಾಟೌಟ್ ಬಳಿ ಲಭ್ಯವಿದೆ. ಒಟ್ಟಾರೆ ಪ್ರಕರಣದ ಸೂತ್ರಧಾರಿಗಳು ಯಾರು? ಅವರ ಹೆಸರೇನು? ಅನ್ನುವುದರ ಬಗ್ಗೆ ಪಕ್ಕಾ ಮಾಹಿತಿ ಇದೆ. ತೀರ ಅಗತ್ಯ ಬಿದ್ದಲ್ಲಿ ಅದನ್ನು ಪ್ರಸಾರ ಮಾಡಲು ಅಥವಾ ಸಂಬಂಧಪಟ್ಟವರಿಗೆ ನೀಡಲು ಸಿದ್ಧವಾಗಿದೆ. ಪ್ರಚಾರಕ್ಕಾಗಿ ಅಥವಾ ಟಿಆರ್ ಪಿ ಉದ್ದೇಶ ನಮಗಿದ್ದಲ್ಲಿ ಈಗಲೂ ನಾವು ನಮ್ಮ ಬಳಿ ಇರುವ ಆಡಿಯೋ ಬಳಸಿಕೊಳ್ಳಬಹುದು. ಇಲ್ಲಿ ಯಾರದ್ದೋ ಸ್ವಾರ್ಥ ಮುಖ್ಯವಲ್ಲ. ಬದಲಿಗೆ ನ್ಯಾಯದ ಪರವಾಗಿ, ಅನ್ಯಾಯಕ್ಕೆ ಒಳಗಾದ ಜನರ ಪರವಾಗಿ ಮಾತ್ರ ನ್ಯೂಸ್ ನಾಟೌಟ್ ಕೆಲಸ ಮಾಡುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಪ್ರಕರಣದಲ್ಲಿ ಪಿಡಿಒ ತಪ್ಪಿದ್ದರೆ ಭ್ರಷ್ಟಾಚಾರ ಮಾಡಿದ್ದರೆ ಅವರಿಗೆ ಶಿಕ್ಷೆ ಆಗಲೇ ಬೇಕು.ಇದಕ್ಕಾಗಿ ಪ್ರತ್ಯೇಕವಾಗಿ ತನಿಖೆ ನಡೆಯಲಿ. ಅಲ್ಲಿ ತನಕ ಅವರನ್ನು ವರ್ಗಾವಣೆ ಮಾಡಬಾರದು.ಕೆಟ್ಟ ಹೆಸರು ಹೊತ್ತು ವರ್ಗಾವಣೆಯಾದರೆ ಪಿಡಿಒ ಮತ್ತೊಂದು ಊರಿಗೆ ಕರ್ತವ್ಯಕ್ಕೆ ಹಾಜರಾದಾಗ ಸಮಸ್ಯೆಯಾಗಬಹುದು. ನಿರಪರಾಧಿಯಾಗಿದ್ದರೆ ವೃತ್ತಿ ಬದುಕಿಗೆ ದೊಡ್ಡ ಹೊಡೆತವಾಗಬಹುದು. ಅಪರಾಧಿಗೆ ಶಿಕ್ಷೆ ಆದರೂ ಪರವಾಗಿಲ್ಲ, ಆದರೆ ನಿರಪರಾಧಿಗೆ ಶಿಕ್ಷೆಯಾಗಬಾರದು. ಅವರಿಗೂ ಒಂದು ಅವಕಾಶ ನೀಡಬೇಕು, ಸಮಗ್ರ ತನಿಖೆ ನಡೆಯಲಿ, ಎಲ್ಲ ವಿಚಾರವೂ ಹೊರ ಬೀಳಲಿ. ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ಪಿಡಿಒ ತೇಜೋವಧೆಗೆ ಕಾಣದ ಕೈಗಳು ಪ್ರಯತ್ನಿಸುತ್ತಿದ್ದರೆ ಅಂತಹವರ ವಿರುದ್ಧ ಉಗ್ರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ದೇಶದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಷ್ಟೇ ಪ್ರಭಾವಿಯಾದರೂ ತಲೆಬಾಗಲೇ ಬೇಕು.
ಸಂಪಾದಕ, ನ್ಯೂಸ್ ನಾಟೌಟ್ ಕನ್ನಡ ವೆಬ್ಸೈಟ್, ಬೆಂಗಳೂರು