ನವದೆಹಲಿ: ಭಾರತವು ಗುರುವಾರ 100 ಕೋಟಿ ಕೋವಿಡ್\–19 ಲಸಿಕೆ ಡೋಸ್ ಗಳ ದಾಖಲೆಯ ಹಂತವನ್ನು ದಾಟಿದ್ದು, ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.
‘ಕಳೆದ ದೀಪಾವಳಿ ವೇಳೆಗೆ ಆತಂಕವಿತ್ತು, ಈ ದೀಪಾವಳಿ ವೇಳೆಗೆ ನಮ್ಮೊಂದಿಗೆ 100 ಕೋಟಿ ಕೋವಿಡ್–19 ಲಸಿಕೆ ಡೋಸ್ ಗಳ ವಿಶ್ವಾಸವಿದೆ. ನಾವು ಹಿಂದೆ ವಿದೇಶಗಳ ಉತ್ಪನ್ನಗಳ ಬಗೆಗೆ ಆಕರ್ಷಿತರಾಗುತ್ತಿದ್ದೆವು. ಆದರೆ, ಈಗ ದೇಶೀಯವಾಗಿ ಉತ್ತಮ ತಯಾರಿಕೆ ನಡೆಯುತ್ತಿದೆ. ಎಲ್ಲರೂ ದೇಶೀಯ ವಸ್ತುಗಳನ್ನು ಖರೀದಿಸಿ, ಅದರಿಂದ ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಗೆ ಸಹಾಯವಾಗುತ್ತದೆ’ ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ 100 ಕೋಟಿ ಲಸಿಕೆ ಎಂಬುದು ಕೇವಲ ಲೆಕ್ಕಾಚಾರವಲ್ಲ, ಅದು ಹೊಸ ಭಾರತದ ಹೆಗ್ಗುರುತು. ನಾವು ಅತ್ಯಂತ ಕಠಿಣ ಗುರಿಯನ್ನು ತಲುಪಿದ್ದೇವೆ, ಅದು ಅಸಾಮಾನ್ಯವಾದುದು ಎಂದರು.
ಭಾರತದ ಒಗ್ಗಟ್ಟಿಗೆ ಸಾಕ್ಷಿ ತಟ್ಟೆ, ದೀಪ
ಕಳೆದ ವರ್ಷ ಭಾರತೀಯರು ತಟ್ಟೆಗಳನ್ನು ಬಡಿದು ದೀಪಗಳನ್ನು ಹಚ್ಚಿದರ ಬಗ್ಗೆ ಹಲವು ಮಂದಿ ವ್ಯಂಗ್ಯವಾಡಿದರು. ಆದರೆ, ಅದು ಭಾರತದ ಒಗ್ಗಟ್ಟನ್ನು ಸಾರುವ ಸಂದರ್ಭವಾಗಿತ್ತು ಎಂದು ಸಮರ್ಥಿಸಿಕೊಂಡರು. ಭಾರತದ ಲಸಿಕೆ ಯೋಜನೆಯು ವಿಜ್ಞಾನ ಮತ್ತು ವೈಜ್ಞಾನಿಕ ಮಾರ್ಗದಲ್ಲಿಯೇ ಮುಂದುವರಿದಿದೆ ಎಂದು ಪ್ರಧಾನಿ ಹೇಳಿದರು. ನಿನ್ನೆ ಪ್ರಧಾನಿ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಜಗತ್ತಿನ ಆರ್ಥಿಕತೆಯು ಮುಗ್ಗರಿಸುವಂತೆ ಮಾಡಿದ ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ವಹಿಸಿದ ಪಾತ್ರ ನಿರ್ಣಾಯಕ ಎಂದು ಮೋದಿ ಕೊಂಡಾಡಿದರು. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್–19 ದೃಢ ಪ್ರಕರಣಗಳ ಸಂಖ್ಯೆ 20,000ಕ್ಕಿಂತಲೂ ಕಡಿಮೆ ದಾಖಲಾಗುತ್ತಿದೆ. ನೂರು ಕೋಟಿ ಲಸಿಕೆ ಡೋಸ್ ಗಳ ಬಲವಾದ ಸುರಕ್ಷಾ ಕವಚವನ್ನು ಭಾರತವು ಈಗ ಹೊಂದಿದೆ. ಇದು ಭಾರತದ ಪೌರರ ಸಾಧನೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.