ಮಂಗಳೂರು : ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ವಕೀಲರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ..!
ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಕಳೆದ ಆಗಸ್ಟ್ 8 ರಂದು ವಕೀಲ ಕೆ.ಎಸ್.ಎನ್ ರಾಜೇಶ್ ಅವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದಳು. ಈ ನಡುವೆ, ರಾಜೇಶ್ ಯುವತಿಯನ್ನು ಪುಸಲಾಯಿಸಿ ಸೆಕ್ಸ್ ನಡೆಸಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಕಳೆದ ಸೆ.25 ರಂದು ತನ್ನ ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಕುತೂಹಲ ಕೆರಳಿಸಿದ ಆಡಿಯೋ ದಾಖಲೆ
ಆರೋಪಿ ವಿರುದ್ಧ ಸೆಕ್ಷನ್ 376, 376-2, 376(2)-ಕೆ, 376 ಸಿ, 511, 354(ಎ), 354(ಬಿ), 354 (ಸಿ), 354 (ಡಿ), 506, 34, 384, 388, 389 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ರಾಜೇಶ್ ಮತ್ತು ವಿದ್ಯಾರ್ಥಿನಿ ಮಾತನಾಡಿದ್ದು ಎನ್ನಲಾದ ಫೋನ್ ಕರೆ ಆಡಿಯೋ ಹರಿದಾಡಿತ್ತು. ಆಕೆಯನ್ನು ಕಚೇರಿಗೆ ಬರುವಂತೆ ಮತ್ತು ಮುಂದೆಂದೂ ಈ ರೀತಿ ನಡೆದುಕೊಳ್ಳಲ್ಲ. ಇಲ್ಲಿಗೇ ಬಿಟ್ಟು ಬಿಡು ಎಂದು ವಕೀಲ ಗೋಗರೆಯುವ ಆಡಿಯೋ ಇತ್ತು.
ಇಮೇಜ್ ಡ್ಯಾಮೇಜ್ ಹುನ್ನಾರ
ಈ ಬಗ್ಗೆ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಜೇಶ್, ಇದು ನನ್ನ ಇಮೇಜ್ ಹಾಳು ಮಾಡಲು ಯತ್ನಿಸುವ ಪ್ರಯತ್ನ. ನನ್ನನ್ನು ಲೋಕಾಯುಕ್ತ ಹುದ್ದೆಯಿಂದ ತೆರವುಗೊಳಿಸುವ ಹುನ್ನಾರ ಎಂದು ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಸಂಜೆ ಮಂಗಳೂರು ಪೊಲೀಸ್ ಕಮಿಷನರ್ ಭೇಟಿಯಾಗಿದ್ದ ಎಬಿವಿಪಿ ನಿಯೋಗ, ವಕೀಲನನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿತ್ತು.