ಬೆಳಗಾವಿ : ಅನ್ಯಕೋಮಿನ ಯುವಕನನ್ನು ಪ್ರೀತಿಸಿದಕ್ಕೆ ಯುವತಿ ತಂದೆ ಮತ್ತು ತಾಯಿಯೇ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹತ್ಯೆ ಮಾಡಿ ರೈಲ್ವೇ ಹಳಿಗೆ ತಳ್ಳಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಹತ್ತು ಮಂದಿ ಹಂತಕರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೈಕಾಲು ಕಟ್ಟಿ ರೈಲ್ವೇ ಟ್ರ್ಯಾಕ್ ಮೇಲೆ ತಳ್ಳಿ ರುಂಡ, ಮುಂಡ ಬೇರ್ಪಡಿಸಿ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ ಹಂತಕರನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಅನ್ಯಕೋಮಿನ ಯುವಕನನ್ನು ಪ್ರೀತಿಸಿದಕ್ಕೆ ಯುವತಿ ತಂದೆ ಮತ್ತು ತಾಯಿಯೇ ಸೇರಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದು ಸಾಬೀತಾಗಿದೆ. ಕಳೆದ ಸೆ.28 ರಂದು ಖಾನಾಪುರ ನಿವಾಸಿ ಅರ್ಬಾಜ್ ಮುಲ್ಲಾನ ಶವ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರ್ಬಾಜ್ ಮತ್ತು ಅದೇ ಗ್ರಾಮದ ಶ್ವೇತಾ ಕುಂಬಾರ್ ಎಂಬ ಯುವತಿ ಕಳೆದ ಮೂರ್ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಯುವತಿಯ ಹೆತ್ತವರ ಗಮನಕ್ಕೆ ಬಂದು ಬಹಳಷ್ಟು ಬಾರಿ ಅರ್ಬಾಜ್ ಮುಲ್ಲಾಗೆ ಕರೆಸಿ ಯುವತಿಯ ತಂದೆ ಈಶ್ವರ್ ಕಂಬಾರ ವಾರ್ನಿಂಗ್ ಮಾಡಿದ್ದರು. ಆದ್ರೆ ಪರಸ್ಪರ ಒಪ್ಪಿ ಪ್ರೀತಿಸುತ್ತಿದ್ದ ಪ್ರೇಮಿಗಳು ಮಾತ್ರ ದೂರವಾಗಿರಲಿಲ್ಲ.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೆಳಗಾವಿ ಪೊಲೀಸರಿಗೆ ಆರಂಭದಲ್ಲಿ ಕೊಲೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಆದರೆ ಅರ್ಬಾಜ್ ತಾಯಿ ನಜೀಮಾ, ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ತನ್ನ ಮಗ ಪ್ರೀತಿಸುತ್ತಿದ್ದ ಯುವತಿಯ ತಂದೆ, ತಾಯಿ ಮತ್ತು ಕುಟುಂಬಸ್ಥರು ಹಾಗೂ ಶ್ರೀರಾಮಸೇನೆ, ಹಿಂದೂಸ್ತಾನ ಸಂಘಟನೆಯ ಖಾನಾಪುರ ತಾಲೂಕಾ ಅಧ್ಯಕ್ಷ ಪುಂಡಲಿಕ್ ಅಲಿಯಾಸ್ ಮಹಾರಾಜ್ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಅರ್ಬಾಜ್ ಮುಲ್ಲಾನ ಕೊಲೆ ಈಶ್ವರ್ ಕುಂಬಾರ ನೀಡಿದ ಸುಪಾರಿಯಿಂದ ಆಗಿದೆ ಎನ್ನುವ ಸುಳಿವು ಸಿಕ್ಕಿತ್ತು. ಆದರೆ ಸುಪಾರಿ ನೀಡಿದ ಯುವತಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಂತಕರನ್ನು ರಕ್ಷಣೆ ಮಾಡಲು ಮುಂದಾಗಿದ್ದ. ನಾನೇ ಹತ್ಯೆ ಮಾಡಿದ್ದೇನೆ. ಇದರಲ್ಲಿ ಯಾರ ಪಾತ್ರವೂ ಇಲ್ಲಾ ಎಂದು ಹೇಳಿದ್ದ. ಆದರೆ ಖಚಿತ ಮಾಹಿತಿ ಹೊಂದಿದ್ದ ಪೊಲೀಸರು ಎಲ್ಲ ಹತ್ತು ಆರೋಪಿಗಳನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಿದಾಗ ಪ್ರಕರಣದ ಸಂಪೂರ್ಣ ಮಾಹಿತಿ ಹೊರಬಿದ್ದಿದೆ.