ತಿರುವನಂತಪುರ: ಕೇರಳದ ದಕ್ಷಿಣ ಮತ್ತು ಕೇಂದ್ರ ಭಾಗದಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಸಂಭವಿಸಿದ ಪರಿಣಾಮ 18 ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸಂಬಂಧ ತುರ್ತು ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಅವರು, ರಾಜ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ಜನರ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಿದ್ದೇವೆ. ಸೇನೆ, ವಾಯುಪಡೆ ಮತ್ತು ನೌಕಾದಳದ ನೆರವು ಕೋರಿದ್ದೇವೆ. ನಿರಾಶ್ರಿತರ ಶಿಬಿರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಪಟ್ಟಣಂತಿಟ್ಟ, ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದೆ. ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ರಕ್ಷಿಸುವಂತೆ ಹಾಗೂ ಪ್ರವಾಹ ಮತ್ತು ಭೂಕುಸಿತ ಸಂಭವಿಸಬಹುದಾದ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.