ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಐಷಾರಾಮಿ ಪ್ರದೇಶಗಳಲ್ಲಿ ಒಂದು ಎಂದೇ ಕರೆಯಿಸಿಕೊಳ್ಳುವ ಇಂದಿರಾನಗರದ 100 ಅಡಿ ರಸ್ತೆ ಗುಂಡಿಗಳಿಂದನೇ ತುಂಬಿ ಹೋಗಿದ್ದು, ಅವ್ಯವಸ್ಥೆಯ ಆಗರವಾಗಿದೆ.
ಇಂದಿರಾನಗರ ನೂರು (100) ಅಡಿ ರಸ್ತೆ, ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆ ಜೊತೆ ಹಳೆ ಮದ್ರಾಸ್ ರಸ್ತೆ ಸಂಪರ್ಕಿಸುತ್ತದೆ. ಒಂದು ಕೊನೆಯಲ್ಲಿ ಮಧ್ಯಂತರ ವರ್ತುಲ ರಸ್ತೆ ಫ್ಲೈಓವರ್ ಜಂಕ್ಷನ್ (ದೊಮ್ಮಲೂರು ಜಂಕ್ಷನ್), ಮತ್ತೊಂದು ಕೊನೆಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಇದೆ. ಕಳೆದ ಕೆಲವು ವರ್ಷಗಳಿಂದ 100 ಅಡಿ ರಸ್ತೆ ಬೆಂಗಳೂರು ವಾಣಿಜ್ಯಿಕವಾಗಿದ್ದು ಸದ್ಯ ರಸ್ತೆಯ ಪರಿಸ್ಥಿತಿ ಶೋಚನೀಯವಾಗಿದ್ದು ವ್ಯಾಪಕ ಟೀಕೆ ಕೇಳಿ ಬಂದಿದೆ.
ಸಾರ್ವಜನಿಕರ ಪರದಾಟ, ಆಕ್ರೋಶ
ರಸ್ತೆಯ ಕೆಟ್ಟ ಪರಿಸ್ಥಿತಿ ಬಗ್ಗೆ ಸಾರ್ವಜನಿಕರು ಕೂ ಮಾಡಿದ್ದೂ, ದಿನ ಬೆಳಿಗ್ಗೆ ಈ ರಸ್ತೆಯಲ್ಲಿ ಕಚೇರಿಗೆ ಹೋಗುವುದೆಂದರೆ ಯಮ ಯಾತನೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ‘ಐಟಿ ಕಂಪೆನಿಗಳೇ ಸಾಲು ಸಾಲು ಚಕ್ಕಳ ಮಕ್ಕಳ ಹಾಕಿ ಕೂತಂತಿರುವ ಇಂದಿರಾನಗರದ ರೋಡು ಮೈಕೈ ತೂತು ಮಾಡಿಕೊಂಡು ಸೊರಗಿ ಸತ್ತು ಹೋಗಿದೆ.. ಅದರ ಅವಸ್ಥೆ ನೋಡಿದರೆ ಆ ರೋಡಿಗೆ ಜನ್ಮವಿತ್ತವರ ಮುಖ ನೋಡ್ಬೇಕಲ್ಲ ಅನ್ಸತ್ತೆ ಎಂದು ಸುನಿಲ್ ಎನ್ನುವವರು ಕೂ ಮಾಡಿದ್ದಾರೆ.
‘ಕಷ್ಟಕಷ್ಟ. ಬೆಂಗಳೂರಿನ ಇಂದಿರಾನಗರದ ನೂರು ಅಡಿ ವರ್ತುಲ ರಸ್ತೆಯಲ್ಲಿ ಪ್ರಯಾಣ ದೇವರಿಗೂ ಬೇಡ. ಬಿಬಿಎಂಪಿ ರಸ್ತೆ ರಿಪೇರಿ ಮಾಡೋದಾದ್ರೂ ಯಾವಾಗ?’ ಎಂದು ಗಣೇಶ್ ಅನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾ ನಗರದ 100 ಅಡಿ ವರ್ತುಲ ರಸ್ತೆಯಲ್ಲಿ ಸಾಗುವುದು ಜೀವ ಪಣಕ್ಕಿಟ್ಟು ನಡೆಸುವ ಯಾವುದೇ ಸಾಹಸಮಯ ಪ್ರದರ್ಶನ ನೀಡುವ ಸ್ಟಂಟ್ ಗಳಿಗೆ ಹೋಲಿಸಿದರೆ ಅದಕ್ಕಿಂತ ಕಡಿಮೆ ಅನುಭವನ್ನಂತೂ ನೀಡಲಾರದು. ನೀವೂ ಈ ಮಾರ್ಗದಲ್ಲಿ ಸಂಚರಿಸಿದ್ದರೆ ನಿಮ್ಮ ಅನಿಸಿಕೆ ಏನು?’ ಎಂದು ನರೇಶ್ ಅನ್ನುವವರು ಕೂ ಮಾಡಿದ್ದಾರೆ.