ನೆಲ್ಯಾಡಿ: ಇಲ್ಲಿನ ಸಮೀಪದ ಗೋಳಿತೊಟ್ಟಿನಿಂದ ಕೊಕ್ಕಡ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು ಸಚಿವ ಎಸ್. ಅಂಗಾರ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ರಸ್ತೆಗಳ ನಿರ್ಮಾಣ ಆಗಬೇಕು. ಜನರಿಗೆ ಸೌಲಭ್ಯ ಸಿಗಬೇಕು ಅನ್ನುವುದು ನಮ್ಮ ಇಚ್ಚಾಶಕ್ತಿ, ಆದರೆ ಎಲ್ಲದಕ್ಕೂ ವ್ಯವಸ್ಥೆ ಆಗಬೇಕು. ಹೀಗಾಗಿ ಸ್ವಲ್ಪ ಸಮಯ ಹಿಡಿಯುತ್ತದೆ. ಇದೆಲ್ಲದರ ಹೊರತಾಗಿಯೂ ಒತ್ತಡ ತರುವ ಕೆಲಸ ಆಗುತ್ತದೆ. ಜನಪ್ರತಿನಿಧಿಯಾಗಿರುವ ನಾನು ಜನರ ಸೇವೆಗೆ ಸದಾ ಸಿದ್ಧವಾಗಿದ್ದೇನೆ. ಈ ಭಾಗ ನನ್ನ ವಿಧಾನಸಭಾ ವ್ಯಾಪ್ತಿಗೆ ಬಂದ ನಂತರ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ನ್ಯೂಸ್ ನಾಟೌಟ್ ವರದಿ ಪರಿಣಾಮ
ಕಳೆದ ಕೆಲವು ವರ್ಷಗಳಿಂದ ಗೋಳಿತೊಟ್ಟು- ಕೊಕ್ಕಡ ರಸ್ತೆ ಶಿಥಿಲಾವಸ್ಥೆಯಲ್ಲಿತ್ತು. ಹಲವು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಜನರ ಸಂಚಾರಕ್ಕೆ ರಸ್ತೆ ಅನುಕೂಲಕರ ವಾತಾವರಣದಲ್ಲಿರಲಿಲ್ಲ. ಕನಿಷ್ಟ ಆರೋಗ್ಯ ಸೇವೆಗೆ ಆಂಬುಲೆನ್ಸ್ ಕೂಡ ರಸ್ತೆಯಲ್ಲಿ ಸಂಚಾರ ಮಾಡುತ್ತಿರಲ್ಲಿಲ್ಲ. ಊರಿನ -ಪರವೂರಿನ ಸಾವಿರಾರು ಜನರು ಸಂಕಷ್ಟದಲ್ಲಿದ್ದಾಗ ಸೆಪ್ಟೆಂಬರ್ 10 ರಂದು ‘ಸಚಿವ ಅಂಗಾರರೇ ಕೂಡಲೇ ಕೊಕ್ಕಡ-ಗೋಳಿತೊಟ್ಟು ರಸ್ತೆ ಸರಿಪಡಿಸಿ, ಜನರ ಜೀವ ಉಳಿಸಿ’ ಎಂದು ನ್ಯೂಸ್ ನಾಟೌಟ್ ವಿಶೇಷ ವರದಿ ಪ್ರಕಟಿಸಿತ್ತು. ಮಾತ್ರವಲ್ಲ ಹಲವು ಫಾಲೋ ಅಪ್ ಸ್ಟೋರಿಗಳನ್ನು ಮಾಡಿ ಸಚಿವರ ಗಮನ ಸೆಳೆದಿತ್ತು. ವರದಿ ನಂತರ ಊರಿನ ಜನರು ಕೂಡ ಸಂಘಟಿತರಾಗಿ ರಸ್ತೆ ನಿರ್ಮಾಣವಾಗಲೇ ಬೇಕೆಂದು ಒತ್ತಾಯಿಸಿದ್ದರು. ಇದೀಗ ಗೋಳಿತೊಟ್ಟಿನಿಂದ ಕೊಕ್ಕಡ ಸಂಪರ್ಕ ಕಲ್ಪಿಸುವ ರಸ್ತೆಗೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿ ಜನರ ಉಪಯೋಗಕ್ಕೆ ಸಿಗಲಿದೆ.