ಬೆಂಗಳೂರು: ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಇಂದು (ಶುಕ್ರವಾರ) ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.
ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ, ಸಿನಿಮಾರಂಗದ ಒಡನಾಟ ಅವರಿಗಿದೆ. ಈಶ್ವರ ಅಲ್ಲಾ (ಕಿರು ಕಾದಂಬರಿ), ಶೇಕ್ಸ್ ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್ ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು) ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಗೃಹ, ಮಿಥಿಲೆಯ ಸೀತೆಯರು, ಕರ್ಫ್ಯೂ, ಶಾಸ್ತ್ರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಗೋವಿಂದ ರಾವ್ ನಟಿಸಿದ್ದರು. ಗೋವಿಂದ ರಾವ್ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.