ನವದೆಹಲಿ: ರಸ್ತೆ ಅಪಘಾತಗಳಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವವರನ್ನು ಬದುಕಿಸಲು ಹಾಗೂ ಅಪಘಾತದಿಂದ ತೊಂದರೆಗೆ ಒಳಗಾದವರಿಗೆ ತುರ್ತು ನೆರವು ನೀಡಲು ಸಾರ್ವಜನಿಕರನ್ನು ಪ್ರೇರೇಪಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಹೊಸ ಯೋಜನೆಗೆ ಚಾಲನೆ ನೀಡಿದೆ. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿ, ಅವರ ಜೀವ ಉಳಿಸುವವರಿಗೆ ಈ ಯೋಜನೆಯಡಿ ‘ಉತ್ತಮ ಆಪತ್ಪಾಂಧವ ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಏನಿದು ಯೋಜನೆ?
ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ, ಅವರ ಜೀವ ಉಳಿಸುವವರಿಗೆ ರೂ. 5 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಈ ‘ಆಪತ್ಪಾಂಧವ’ರ ಪೈಕಿ, ಒಂದು ವರ್ಷದ ಅವಧಿಯಲ್ಲಿ ಗಮನಾರ್ಹ ಸೇವೆ ಕಾರ್ಯ ಮಾಡಿರುವ 10 ಜನರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿ ತಲಾ ರೂ.1 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಸಚಿವಾಲಯ ತಿಳಿಸಿದೆ. ಈ ಪ್ರಶಸ್ತಿಗೆ ಆಯ್ಕೆಯಾಗುವವರಿಗೆ ನಗದು ಬಹುಮಾನ ನೀಡುವ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ಆರಂಭಿಕ ಅನುದಾನವಾಗಿ ತಲಾ 5 ಲಕ್ಷ ನೀಡಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.
ಯೋಜನೆ ಜಾರಿ ಯಾವಾಗ?
ಈ ಯೋಜನೆ ಅ. 15ರಿಂದ ಜಾರಿಗೆ ಬರಲಿದ್ದು, 2026ರ ಮಾರ್ಚ್ 31ರ ವರೆಗೆ ಜಾರಿಯಲ್ಲಿರುವುದು. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ಸಚಿವಾಲಯ ಈ ಸಂಬಂಧ ಪತ್ರ ಬರೆದಿದೆ.