ಸುಳ್ಯ: ಬಲವಂತದಿಂದ ಮತಾಂತರಗೊಂಡು ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅನ್ನುವ ವ್ಯಕ್ತಿಯನ್ನು ಮದುವೆಯಾಗಿ ಜೀವನದಲ್ಲಿ ಪಡಬಾರದ ಕಷ್ಟಪಟ್ಟು ಈಗ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿರುವ ಆಸಿಯಾ ಇಸ್ಲಾಂ ಧರ್ಮದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತ್ತೆ ಮರಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈಕೆಯ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಆಸಿಯಾ, ಮುಸ್ಲಿಂ ಧರ್ಮ ನನಗೆ ಯಾವ ಸಮಸ್ಯೆಯನ್ನೂ ಮಾಡಿಲ್ಲ. ಇಬ್ರಾಹಿಂ ಕಟ್ಟೇಕಾರ್ ಹಾಗೂ ಆತನ ಕುಟುಂಬದಿಂದ ಮಾತ್ರ ನನಗೆ ತೊಂದರೆಯಾಗಿದೆ. ಇಡೀ ಮುಸ್ಲಿಂ ಜನಾಂಗ ನನ್ನ ಬೆಂಬಲಕ್ಕೆ ನಿಂತಿದೆ. ಅವರೆಲ್ಲರ ಪ್ರೀತಿಯನ್ನು ಬಿಟ್ಟು ಹೋಗುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಂ ಧರ್ಮದಲ್ಲಿದ್ದು ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವುದಕ್ಕಾಗಿ ಹೋರಾಡುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಸಂಘಟನೆಯ ವ್ಯಕ್ತಿಯೊಬ್ಬರು ಹೇಳಿರುವುದು ಹೀಗೆ, ಶಾಂತಿ ಹೆಸರಲ್ಲಿದ್ದವಳು ಆಸಿಯಾ ಆಗಿ ಬದಲಾದಳು. ಆತ ಆಕೆಗೆ ಮೋಸ ಮಾಡಿದ. ಹೀಗಿದ್ದರೂ ಆಕೆ ಹಿಂದೂ ಧರ್ಮಕ್ಕೆ ಬರಲು ಒಪ್ಪುತ್ತಿಲ್ಲ. ಇದರಿಂದ ಆಕೆಯ ತಲೆಯಲ್ಲಿ ಅದೆಷ್ಟು ಮುಸ್ಲಿಂ ಪ್ರೇಮ ಬೇರೂರಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈಕೆ ಎರಡು ವರ್ಷದಿಂದ ಹೋರಾಡಿ ತನಗೇ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತಹುದರಲ್ಲಿ ನೊಂದ ಹೆಣ್ಣು ಮಕ್ಕಳ ಪರವಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಮೊದಲು ಹೆತ್ತು ಹೊತ್ತು ಬೆಳೆಸಿದ ತಂದೆ -ತಾಯಿಯನ್ನು ಭೇಟಿಯಾಗಲಿ, ಮರಳಿ ಹಿಂದೂ ಧರ್ಮಕ್ಕೆ ಹೋಗುವುದನ್ನು ಕಲಿಯಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬದುಕು ಇನ್ನಷ್ಟು ಆಕೆಗೆ ಕಠಿಣವಾಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.