ಬಿಹಾರ: ಕರೋನಾ ಕಾರಣದಿಂದ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕುಳಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ದಿಢೀರ್ 5.5 ಲಕ್ಷ ರೂಪಾಯಿ ಜಮೆ ಆಗಿರುವ ಘಟನೆ ನಡೆದಿದೆ. ಒಬ್ಬ ವ್ಯಕ್ತಿಗೆ ಇದಕ್ಕಿಂತ ಸಂತೋಷ ಏನು ಬೇಕು. ಸಿಕ್ಕಿದ್ದೆ ಚಾನ್ಸ್ ಅಂತ ಹಣವನ್ನು ನೀರಿನಂತೆ ಖರ್ಚು ಮಾಡಿದ. ಈ ನಡುವೆ ಬ್ಯಾಂಕಿನಿAದ ಮನೆಗೆ ನೋಟಿಸ್ ಬಂದಿತ್ತು. ಇದಕ್ಕೂ ಆತ ಕ್ಯಾರೆ ಅನ್ನಲಿಲ್ಲ. ಕೆಲವು ದಿನಗಳ ಬಳಿಕ ಮನೆಗೆ ಪೊಲೀಸ್ ಬಂದಾಗಲೇ ಆತನಿಗೆ ಎಚ್ಚರಿಕೆಯಾಗಿದ್ದು. ಇದು ಬಿಹಾರದ ಖಗಾರಿಯಾ ಜಿಲ್ಲೆಯ ಭಕ್ತಿಯಾರ್ಪುರ್ ಗ್ರಾಮದಲ್ಲಿ ನಡೆದಿರುವ ಅಪರೂಪದ ವಿದ್ಯಮಾನವಾಗಿದೆ. ಇಲ್ಲಿ ಕಥಾ ನಾಯಕ ಹಾಗೂ ವಿಲನ್ ರಂಜಿತ್ ದಾಸ್ ಅನ್ನುವ ವ್ಯಕ್ತಿ.
ಏನಿದು ಘಟನೆ?
ವರ್ಗಾವಣೆಯಲ್ಲಿ ಆದ ತಪ್ಪಿನಿಂದ ಖಗಾರಿಯಾದ ಗ್ರಾಮೀಣ ಬ್ಯಾಂಕ್ 5.5 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿದೆ. ಈ ಹಣ ನೇರವಾಗಿ ರಂಜಿತ್ ದಾಸ್ ಖಾತೆಗೆ ಬಂದು ಬಿದ್ದಿದೆ. ಮಾರ್ಚ್ ತಿಂಗಳಲ್ಲಿ ಕೊರೋನಾ ಹೊಡೆತದಿಂದ ಕೂತಿದ್ದ ರಂಜಿತ್ ದಾಸ್ಗೆ ಒಂದೇ ಸಲಕ್ಕೆ ಹಣ ಬಂದಿದ್ದು ನೋಡಿ ಲಾಟರಿ ಹೊಡೆದಂತಾಗಿದೆ. ಈ ಬೆನ್ನಲ್ಲೇ ತಪ್ಪಿನ ಅರಿವಾಗಿ ಖಗಾರಿಯಾ ಗ್ರಾಮೀಣ ಬ್ಯಾಂಕ್ನವರು ರಂಜಿತ್ ದಾಸ್ ವಿಳಾಸಕ್ಕೆ ಹಲವು ನೊಟೀಸ್ ಕಳುಹಿಸಿದ್ದಾರೆ. ಆದರೆ 5.5 ಲಕ್ಷ ರೂಪಾಯಿ ಪಡೆದ ರಂಜಿತ್ ದಾಸ್ ಬಿಂದಾಸ್ ಆಗಿ ಖರ್ಚು ಮಾಡಲು ಆರಂಭಿಸಿದ್ದಾನೆ. ನೊಟೀಸ್ ಕಳುಹಿಸಿದರೂ ಉತ್ತರ ನೀಡದ ರಂಜಿತ್ ದಾಸ್ ವಿರುದ್ದ ಖಗಾರಿಯಾ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಖಾತೆಯಲ್ಲಿ ಹಣ ಖಾಲಿಯಾಗುತ್ತಿದ್ದಂತೆ ಪೊಲೀಸರು ಮನಗೆ ಬಂದು ರಂಜಿತ್ ದಾಸ್ ವಶಕ್ಕೆ ಪಡೆದಿದ್ದಾರೆ.
ಮೋದಿ ನೀಡಿದ ಮೊದಲ ಕಂತಿನ ಹಣ
5.5 ಲಕ್ಷ ರೂಪಾಯಿ ನನಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಪೊಲೀಸ್ ಸಾಹೇಬರೆ, ನಿಮಗೆ ಗೊತ್ತಿಲ್ಲವೇ? ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ಅಂದೇ ಹೇಳಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ತಿಳಿಸಿದ್ದಾರೆ. ಇದರ ಮೊದಲ ಕಂತನ್ನು ಮೋದಿ ನನ್ನ ಖಾತೆಗೆ ಹಾಕಿದ್ದಾರೆ. ಹೀಗಾಗಿ ಈ ಹಣವನ್ನು ನಾನು ಖರ್ಚು ಮಾಡಿದ್ದೇನೆ ಎಂದು ಪೊಲೀಸರ ಬಳಿ ರಂಜಿತ್ ದಾಸ್ ಹೇಳಿದ್ದಾರೆ. ನನ್ನ ಖಾತೆಯಲ್ಲಿ ಹಣವಿಲ್ಲ. ನಾನು ಹೇಗೆ ಹಿಂದಿರುಗಿಸಲಿ ಎಂದು ರಂಜಿತ್ ದಾಸ್ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ದೂರಿನ ಆಧಾರದಲ್ಲಿ ರಂಜಿತ್ ದಾಸ್ನನ್ನು ಬಂಧಿಸಲಾಗಿದೆ.