ಮುಂಬೈ: ಜ್ಯೋತಿಷ್ಯದಲ್ಲಿ ಜಾತಕ ಸರಿ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿ ಸಂಬಂಧ ಹೊಂದಿದ್ದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಯುವಕನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಕೇಸಿನಿಂದ ಮುಕ್ತಿ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿರುವ ಘಟನೆ ವರದಿಯಾಗಿದೆ. ನ್ಯಾಯಮೂರ್ತಿ ಎಸ್ ಕೆ ಶಿಂಧೆ ಅವರ ನೇತೃತ್ವದ ಏಕಸದಸ್ಯ ಪೀಠ ಅವಿಶೇಕ್ ಮಿತ್ರ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಏನಿದು ಘಟನೆ?
ಯುವತಿ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಉಪನಗರ ಬೊರಿವಾಲಿ ಪೊಲೀಸರು ದಾಖಲಿಸಿದ್ದ ಅತ್ಯಾಚಾರ ಮತ್ತು ವಂಚನೆ ಕೇಸಿನಿಂದ ಮುಕ್ತಿ ನೀಡುವಂತೆ ಅವಿಶೇಕ್ ಮಿತ್ರ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದ. ಜಾತಕದಲ್ಲಿ ಹೊಂದಿಕೆಯಾಗುವುದಿಲ್ಲ ಹೀಗಾಗಿ ಸತಿ-ಪತಿಗಳಾಗಿ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಮಿತ್ರ ಪರ ವಕೀಲ ರಾಜ ಥ್ಯಾಕರೆ ಕೋರ್ಟ್ ನಲ್ಲಿ ವಾದ ಮಂಡಿಸಿದರು. ಇದು ಮದುವೆಯ ನೆಪದಲ್ಲಿ ವಂಚನೆ ಮತ್ತು ಅತ್ಯಾಚಾರ ಪ್ರಕರಣವಲ್ಲ, ಭರವಸೆಯ ಉಲ್ಲಂಘನೆಯ ಪ್ರಕರಣ ಎಂದು ಮಿತ್ರ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ನ್ಯಾಯಮೂರ್ತಿ ಶಿಂಧೆ, ಈ ವಾದವನ್ನು ತಳ್ಳಿ ಹಾಕಿದರು. ದೂರುದಾರ ಯುವತಿಯನ್ನು ಮದುವೆಯಾಗುವ ಭರವಸೆಯನ್ನು ಯುವಕ ಆರಂಭದಲ್ಲಿ ಹೊಂದಿದ್ದ ಎಂದು ತೋರಿಸುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಜಾತಕದಲ್ಲಿ ಹೊಂದಿಕೆಯಾಗುವುದಿಲ್ಲ ಎಂಬುದು ಕೇವಲ ಕುಂಟು ನೆಪವಷ್ಟೆ. ಹೀಗಾಗಿ, ಇದು ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿ ಅರ್ಜಿ ತಿರಸ್ಕರಿಸಿದರು.