ಲಡಾಖ್ : ಪೂರ್ವ ಲಡಾಖ್ ಪ್ರದೇಶದಲ್ಲಿ ಕಳೆದ ವರ್ಷ ಚೀನಾ ಸೈನಿಕರನ್ನು ಭಾರತ ಸೇನೆಯು ಹಿಮ್ಮೆಟ್ಟಿಸಿದ ಬಳಿಕ ಚೀನಾ ಗೌಪ್ಯವಾಗಿ ರಕ್ಷಣಾ ಪಡೆಯನ್ನು ಬಲಪಡಿಸಿಕೊಳ್ಳುತ್ತಿದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ನಡುವಣ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸಿದ ವ್ಯಕ್ತಿಗಳು ಈ ಮಾಹಿತಿಯನ್ನು ನೀಡಿದ್ದಾರೆ. ಅತ್ಯಾಧುನಿಕ ಕಂಟೈನರ್ ಒಳಗೊಂಡ ತಂಗುದಾಣಗಳನ್ನು ಚೀನಾ ದುರ್ಗಮ ಪ್ರದೇಶಗಳಲ್ಲಿ ಸ್ಥಾಪಿಸುತ್ತಿದೆ. ಇದುವರೆಗೆ ಸೇನೆಯನ್ನೇ ಬಳಸದ ಸ್ಥಳಗಳಲ್ಲೂ ಸೈನಿಕರನ್ನು ನಿಯೋಜಿಸಿದೆ. ಈ ಪ್ರದೇಶದಲ್ಲಿ ಭಾರತ ತನ್ನ ಸೇನೆಯನ್ನು ವಿಸ್ತರಿಸಿದ ಬೆನ್ನಲ್ಲೇ ಚೀನಾದಿಂದ ಈ ಬೆಳವಣಿಗೆ ನಡೆದಿರುವುದಾಗಿ ನಿಕಟವರ್ತಿಗಳು ಸೋಮವಾರ ಹೇಳಿದ್ದಾರೆ.
ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಚೀನಾ
ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಪ್ರದೇಶಗಳಲ್ಲಿ ತಂಗುದಾಣಗಳು ತಲೆಯೆತ್ತಿವೆ. ತಾಶಿಗೊಂಗ್, ಮಾಂಜ, ಹಾಟ್ ಸ್ಪ್ರಿಂಗ್ಸ್ ಮತ್ತು ಚುರುಪ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಚೀನಾದ ಸೇನಾ ತಂಗುದಾಣಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಈ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಭಾರತದ ಸೇನೆಯು ಹಿಮ್ಮೆಟ್ಟಿಸಿದ್ದಕ್ಕೆ ಪ್ರತ್ಯುತ್ತರದ ಭಾಗವಾಗಿ ಈ ಬೆಳವಣಿಗೆ ನಡೆದಿದೆ. ಪ್ರಮುಖವಾಗಿ ಕಳೆದ ವರ್ಷ ನಡೆದ ಗಾಲ್ವನ್ ಕಣಿವೆ ಸಂಘರ್ಷದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಚೀನಾ ಈ ಹಿಂದೆ ಸೇನೆಯನ್ನು ಬಳಕೆ ಮಾಡದ ಪ್ರದೇಶಗಳಲ್ಲೂ ಸೇನೆಯನ್ನು ಸ್ಥಾಪಿಸಿದೆ. ಇಂತಹ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಇದುವರೆಗೆ ಚೀನಾ ಸೇನಾ ಚಟುವಟಿಕೆಗಳನ್ನು ನಡೆಸಿರಲಿಲ್ಲ ಎನ್ನಲಾಗಿದೆ.