ಫ್ಲೋರಿಡಾ: ರಸ್ತೆಯಲ್ಲಿ ಗುಂಡಿಗಳಾದ ಸಂದರ್ಭದಲ್ಲಿ ಬಾಳೆ ಗಿಡವನ್ನು ನೆಟ್ಟು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಭಾರತದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. ಇಂತಹ ಪ್ರತಿಭಟನೆಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಭಾರತದ ಮಾದರಿಯಲ್ಲೇ ಪ್ರತಿಭಟನೆ ನಡೆಯುತ್ತದೆ ಅನ್ನುವುದು ವರದಿಯಾಗಿದೆ.
ಫ್ಲೋರಿಡಾ ವ್ಯಕ್ತಿ ಬ್ರ್ಯಾನ್ ರೇಮಂಡ್ ದೊಡ್ಡ ದೊಡ್ಡ ಗುಂಡಿಗಳ ರಸ್ತೆಯಲ್ಲಿ ಪ್ರಯಾಣ ಮಾಡಿ ತಾಳ್ಮೆ ಕಳೆದುಕೊಂಡಿದ್ದಾನೆ. ರಸ್ತೆ ಸರಿಪಡಿಸಲು ಹಲವು ಮನವಿಗಳನ್ನು ಸಲ್ಲಿಸಿದ್ದಾನೆ. ಆದರೆ ಯಾವುದು ಪ್ರಯೋಜನವಾಗಿಲ್ಲ. ಹೀಗಾಗಿ ರಸ್ತೆಯಲ್ಲಿನ ದೊಡ್ಡ ದೊಡ್ಡ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. ಫ್ಲೋರಿಡಾದ ಹೊಂಡಾ ಡ್ರೈವ್ ಖಾಸಗಿ ರಸ್ತೆ. ಫೋರ್ಟ್ ಮೆಯರ್ಸ್ ಅಧಿಕಾರಿಗಳು ಈ ರಸ್ತೆ ನಿರ್ವಹಣೆ ಮಾಡುತ್ತಾರೆ. ಆದರೆ ಪ್ರತಿ ದಿನ ಇದೇ ರಸ್ತೆಯಲ್ಲಿ ಸಾಗುವ ಬ್ರ್ಯಾನ್ ರೇಮೆಂಡ್ ಬೇಸತ್ತಿದ್ದಾನೆ. ತನ್ನ ಕಾರುಗಳು ರಸ್ತೆ ಗುಂಡಿಗಳಲ್ಲಿ ಬಿದ್ದು ಹಾಳಾಗಿದೆ. ಹಲವು ಅಪಘಾತಗಳು ಸಂಭವಿಸಿದೆ. ಹೀಗಾಗಿ ಬಾಳೆ ಗಿಡ ನೆಟ್ಟರೆ ಎಲ್ಲರ ಗಮನಕ್ಕೆ ಬರುತ್ತದೆ. ಇಷ್ಟೇ ಅಲ್ಲ ಪ್ರಯಾಣಿಕರು ಗುಂಡಿ ಇರುವುದನ್ನು ಗಮನಿಸಿ ಮುಂದೆ ಸಾಗಬಹುದು ಎಂದು ರೇಮಂಡ್ ಹೇಳಿದ್ದಾನೆ.