ಬೆಂಗಳೂರು: ಹಳ್ಳಿ ಹುಡುಗನ ಶಾಲಾ ದಿನಗಳ ಕನಸು ನನಸಾಗಿದೆ. ಒಂದಲ್ಲ ಎರಡಲ್ಲ ಹತ್ತು ವರ್ಷ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕಠಿಣ ತರಬೇತಿಯ ಬಳಿಕ ಯುಎಇನಲ್ಲಿ ನಡೆದ ಪ್ರೊ ವಿಶ್ವ ನ್ಯಾಚುರಲ್ ಬಾಡಿಬಿಲ್ಡಿಂಗ್ ಚಾಂಪಿಯನ್ ಶಿಪ್ನಲ್ಲಿ ವಿಶ್ವದ ಘಟಾನುಘಟಿಗಳನ್ನು ಸೋಲಿಸಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇವರ ಪ್ರಚಂಡ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹೆಸರು ಎಫ್ರಾಯಿಮ್ ಪೌಲ್, ಇನ್ನು 27 ವರ್ಷ, ಸದ್ಯ ಯುಎಇನಲ್ಲಿ ವಾಸ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮರಕಡ ದವರು. ಹಲವಾರು ಟೂರ್ನಿಗಳಲ್ಲಿ ಭಾಗವಹಿಸಿರುವ ಎಫ್ರಾಯಿಮ್ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದಾರೆ. ಈಗ ವರ್ಲ್ಡ್ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಫೆಡರೇಷನ್ ಚಾಂಪಿಯನ್ ಶಿಪ್ ಗೆದ್ದಿದ್ದಾರೆ. ಇದು ಅವರ ವೃತ್ತಿ ಜೀವನದ ಮೊದಲ ಪ್ರೊ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದ್ದು ಈ ಗೆಲುವು ವಿಶೇಷ ಅನುಭವ ನೀಡಿದೆ.
ವಿಶ್ವ ದಿಗ್ಗಜರಿಗೆ ನೀರು ಕುಡಿಸಿದ ಪೌಲ್
ಮಿಡಲ್ ವೇಟ್ ವಿಭಾಗದಲ್ಲಿ ಪಾಲ್ಗೊಂಡಿದ್ದ ಎಫ್ರಾಯಿಮ್ ಯುಎಇ ಕೂಟದಲ್ಲಿ ತಮ್ಮ ವಿಶಿಷ್ಟ ಅಂಗಸೌಷ್ಠವ ಪ್ರದರ್ಶಿಸಿ ವಿಶ್ವ ದಿಗ್ಗಜರಿಗೆ ಶಾಕ್ ನೀಡಿದ್ದಾರೆ. ಅವರು ಫೈನಲ್ನಲ್ಲಿ ಜೋರ್ಡಾನ್, ಕೀನ್ಯಾ, ಸೌದಿ ಅರೆಬೀಯಾ, ಈಜಿಫ್ಟ್, ಇರಾಕ್ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ರಾಜ್ಯ, ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ ಗುರಿ
ವಿವಿಧ ರಾಷ್ಟ್ರಗಳಲ್ಲಿ ಪ್ರೊ ಸ್ಪರ್ಧೆ ಚಾಂಪಿಯನ್ ಆದವರು ಮುಂದಿನ ದಿನಗಳಲ್ಲಿ ಒಂದೇ ವೇದಿಕೆಯಲ್ಲಿ ಎದುರಾಗುತ್ತಾರೆ. ಅಮೆರಿಕದ ಲಾಸ್ ವೇಗಾಸ್ ನಲ್ಲಿ ನವೆಂಬರ್ನಲ್ಲಿ ವಿಶ್ವ ಚಾಂಪಿಯನ್ ಶಿಪ್ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಗೆಲ್ಲುವುದು ಎಫ್ರಾಯಿಮ್ ಜೀವನದ ದೊಡ್ಡ ಕನಸಾಗಿದೆ.
ಗೆದ್ದಿರುವ ಪ್ರಮುಖ ಪ್ರಶಸ್ತಿ
2015ರಲ್ಲಿ ಮುಂಬೈನಲ್ಲಿ ನಡೆದ ಮಸಲ್ ಮೆನಿಯಾ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಎಂಟು ಸಲ ರಾಜ್ಯ ಮಟ್ಟದಲ್ಲಿ ಮಿಸ್ಟರ್ ಕರ್ನಾಟಕ ಚಿನ್ನದ ಪದಕ, ರಾಜ್ಯ ಚಾಂಪಿಯನ್ ಶಿಪ್ನಲ್ಲಿ ಐದು ಸಲ ಬೆಳ್ಳಿಯ ಹಾಗೂ ಹಲವು ಸಲ ಕಂಚಿನ ಪದಕ ಪಡೆದುಕೊಂಡಿದ್ದಾರೆ. 2016ರಲ್ಲಿ ದಕ್ಷಿಣ ಭಾರತ ದೇಹದಾರ್ಢ್ಯ ಸ್ಪರ್ಧೆಯಲ್ಲಿ 4ನೇ ಸ್ಥಾನ, 2017 ರಲ್ಲಿ ಚೆನ್ನೈನಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಕಪ್ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ, 2018ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸ್ಪರ್ಧೆ ಬಾಡಿ ಪವರ್ ಎಕ್ಸ್ ಪೋ ಮಸಲ್ ಮಾಡಲ್ನಲ್ಲಿ ಮೊದಲ ಸ್ಥಾನ ಸೇರಿದಂತೆ ಇದುವರೆಗೂ ಒಟ್ಟು 37ಕ್ಕೂ ಹೆಚ್ಚು ಪ್ರಮುಖ ಕೂಟಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಪ್ರೊ ಬಾಡಿಬಿಲ್ಡಿಂಗ್ ಎಂದರೇನು?
ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಲೈಟ್ ವೇಟ್, ಮಿಡಿಯಂ ವೇಟ್, ಹೆವಿವೇಟ್ ಹಾಗೂ ಸೂಪರ್ ಹೆವಿವೇಟ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ನಲ್ಲಿ ಕ್ರಮವಾಗಿ ಮೊದಲ ಸ್ಥಾನ ಬರಬೇಕು. ಮೊದಲ ಸ್ಥಾನ ಪಡೆದವರಿಗೆ ಇನ್ನೊಂದು ಸುತ್ತಿಗೆ ಪಂದ್ಯಗಳು ಇರುತ್ತದೆ. ಅದನ್ನ ಚಾಂಪಿಯನ್ ಆಫ್ ಚಾಂಪಿಯನ್ ಎಂದು ಕರೆಯುತ್ತಾರೆ. ಇಲ್ಲಿ ವಿಭಾಗ ಬರುವುದಿಲ್ಲ. ಎಲ್ಲ ಸ್ಪರ್ಧಿಗಳು ಒಂದೇ ಸೂರಿನಡಿ ಬಂದು ಸ್ಪರ್ಧಿಸುತ್ತಾರೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಪ್ರೊ ಚಾಂಪಿಯನ್ ಆಗುತ್ತಾರೆ.
ಓದಿದ್ದು ಬೆಳೆದದ್ದು ಕರಾವಳಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಮರಕಡದ ಆಂಟೋನಿ ಪೌಲ್, ಲೀನಾ ಪೌಲ್ ದಂಪತಿಗೆ ಇಬ್ಬರು ಮಕ್ಕಳು. ಮೊದಲನೆಯವರು ಎಫ್ರಾಯಿಮ್ ಪೌಲ್, ಮತ್ತೊಬ್ಬಳು ತಂಗಿ ನಯನ ಪೌಲ್. ಎಫ್ರಾಯಿಮ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿನಗರ ಮರಕಡ, ಹೈಸ್ಕೂಲ್ ಸೇಂಟ್ ಅಲೋಶಿಯಸ್ ಮಂಗಳೂರು, ಪಿಯುಸಿ ಸೇಂಟ್ ಅಲೋಶಿಯಸ್. ಪದವಿ ಶಿಕ್ಷಣ ರಝಾರಿಯೋ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ನಂತರ ಬಾಡಿಬಿಲ್ಡಿಂಗ್ ನಲ್ಲಿ ಸರ್ಟಿಫಿಕೇಶನ್ ಕೋರ್ಸ್ ಮಾಡಿದರು. ಭಾರತದಲ್ಲಿ ಹಾಗೂ ಯುಎಇನಲ್ಲಿ ಕೋರ್ಸ್ ಪಡೆದಿದ್ದಾರೆ. ದಿನ ನಿತ್ಯ ಮೂರು ಗಂಟೆ ಗಳ ದೇಹ ಕಸರತ್ತನ್ನು ಮಾಡಿ ತಯಾರಿ ನಡೆಸುತ್ತಿದ್ದಾರೆ.
ಆಸಕ್ತಿಯಿಂದ ದೇಹದಾರ್ಢ್ಯ ಪಟು
ಎಫ್ರಾಯಿಮ್ ಗೆ ಕ್ರೀಡೆಯಲ್ಲಿ ಬಾಲ್ಯದಿಂದಲೇ ಆಸಕ್ತಿ ಇತ್ತು. ಪಿಯುಸಿ ಬಳಿಕ ಜಿಮ್ ಹೋಗಿ ವ್ಯಾಯಾಮ ಮಾಡಬೇಕು ಅನಿಸಿತು. ಸ್ನೇಹಿತರೆಲ್ಲ ಸೇರಿ ಪ್ರೋತ್ಸಾಹ ಮಾಡಿದರು. ಅಂತರ್ ವಿಶ್ವ ವಿದ್ಯಾನಿಲಯ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು. ಅಲ್ಲಿ ತೃತೀಯ ಸ್ಥಾನ ಪಡೆದುಕೊಂಡರು. ಅಲ್ಲಿಂದ ಸ್ಫೂರ್ತಿ ಸಿಕ್ಕಿತು. ಇನ್ನಷ್ಟು ಇಲ್ಲಿ ಬೆಳೆಯಬೇಕೆಂದು ಛಲ ಉಕ್ಕಿತು. ಕೋಚ್ ಗಳಾದ ಅನಿಷ್ ಮರಕಡ, ರಾಕೇಶ್ ಕುಳಾಯಿ ಅವರಿಂದ ಸ್ಫೂರ್ತಿ ಪಡೆದು ನಂತರದ ದಿನಗಳಲ್ಲಿ ರಾಜ್ಯ, ರಾಷ್ಟ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ಯುಎಇನಲ್ಲಿ ಜಿಮ್ವೊಂದರಲ್ಲಿ ತರಬೇತುದಾರರಾಗಿದ್ದುಕೊಂಡು ಅಲ್ಲಿಂದಲೇ ಭಾರತ ಪ್ರತಿನಿಧಿಸುತ್ತಿದ್ದಾರೆ ಅನ್ನುವುದು ವಿಶೇಷ.
ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಬಾಡಿಬಿಲ್ಡಿಂಗ್ ಮಾಡುವ ಕನಸು ಇಟ್ಟುಕೊಂಡಿರುವವರು ಇರುತ್ತಾರೆ. ಅಂತಹವರಿಗಾಗಿಯೇ ಮುಂದಿನ ದಿನಗಳಲ್ಲಿ ನನ್ನಿಂದ ಆದ ಸಹಾಯ ಮಾಡುವ ಕನಸಿದೆ. ಅದಕ್ಕೂ ಮೊದಲು ಪ್ರಮುಖ ಅಂತಾರಾಷ್ಟ್ರೀಯ ಕೂಟದಲ್ಲಿ ಗೆಲ್ಲುವುದು ಜೀವನದ ದೊಡ್ಡ ಗುರಿಯಾಗಿದೆ.
ಎಫ್ರಾಯಿಮ್ ಪೌಲ್, ವೃತ್ತಿಪರ ದೇಹದಾರ್ಢ್ಯ ಪಟು