ನವದೆಹಲಿ: ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಲಿ. ಕಂಪನಿಗೆ 4,660 ಕೋಟಿ ರೂ. ಮೊತ್ತದ ಕಾನೂನು ಹೋರಾಟದಲ್ಲಿ ಜಯ ಲಭಿಸಿದೆ. ದೆಹಲಿ ಮೆಟ್ರೋ ಸಂಸ್ಥೆಯ ಜೊತೆ ಈ ಮೊತ್ತದ ಹಣದ ಮೇಲಿನ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಸುಪ್ರೀಂಕೋರ್ಟ್ ಅಂಬಾನಿ ಪರ ಆದೇಶ ನೀಡಿದ್ದು, ನಷ್ಟದಲ್ಲಿದ್ದ ಅವರ ಕಂಪನಿಗೆ ಮರುಜೀವ ಬಂದಂತಾಗಿದೆ.
2038ರವರೆಗೆ ದೇಶದ ಮೊದಲ ಖಾಸಗಿ ಸಿಟಿ ರೈಲ್ವೆ ಯೋಜನೆ ಮುನ್ನಡೆಸಲು ದೆಹಲಿ ಮೆಟ್ರೋ ಜೊತೆ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಲಿ. ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, 2012ರಲ್ಲಿ ಈ ಒಪ್ಪಂದ ಮುರಿದುಬಿದ್ದಿತ್ತು. ಅಂದಿನಿಂದ ಈ ಯೋಜನೆಯ ಹೆಸರಿನಲ್ಲಿದ್ದ ಹಣದ ಮೇಲಿನ ಒಡೆತನದ ಬಗ್ಗೆ ದೆಹಲಿ ಮೆಟ್ರೋ ಹಾಗೂ ರಿಲಯನ್ಸ್ ಮಧ್ಯೆ ಕಾನೂನು ಸಮರ ನಡೆಯುತ್ತಿತ್ತು. ಬಡ್ಡಿ ಸೇರಿ ಆ ಮೊತ್ತವೀಗ 4660 ಕೋಟಿ ರು. ಆಗುತ್ತದೆ. 2017ರಲ್ಲೇ ಅನಿಲ್ ಅಂಬಾನಿ ಪರ ಮಧ್ಯಸ್ಥಿಕೆ ನ್ಯಾಯಾಧಿಕರಣ ಆದೇಶ ನೀಡಿತ್ತು. ಅದರ ವಿರುದ್ಧ ದೆಹಲಿ ಮೆಟ್ರೋ ಮೇಲ್ಮನವಿ ಸಲ್ಲಿಸಿತ್ತು. ಗುರುವಾರ ಸುಪ್ರೀಂ ಕೋರ್ಟ್ ಇಬ್ಬರು ಜಡ್ಜ್ ಗಳ ಒಳಗೊಂಡ ಪೀಠವು ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿದಿದೆ. ಹೀಗಾಗಿ ಈ ಹಣ ಬಳಸಿಕೊಳ್ಳಲು ಅಂಬಾನಿಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.