ಮಂಗಳೂರು: ಅಭಿನವ ವಾಲ್ಮೀಕಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (68) ಅವರು ಆ.14ರ ಶನಿವಾರ ತಡರಾತ್ರಿ ನಿಧನರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನ ಕಲಾವಿದ ಪುರುಷೋತ್ತಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು.ಪುರುಷೋತ್ತಮ ಅವರು ಬಿಎಸ್ಸಿ ಪದವೀಧರರಾಗಿದ್ದರು. ಇವರು ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಇವರು ಮುಂಬೈನ ಗೀತಾಂಬಿಕಾ ಮೇಳ, ಉಪ್ಪಳ ಮೇಳ, ಪುತ್ತೂರು ಮೇಳ, ಕರ್ನಾಟಕದ ಮೇಳದಲ್ಲಿ ಮುಖ್ಯ ಭಾಗವತರಾಗಿದ್ದರು. ಕಳೆದ 30 ವರ್ಷಗಳಿಂದ ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಪೂಂಜ ಅವರು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಸುಮಾರು 32 ಪ್ರಸಂಗಗಳನ್ನು ಬರೆದಿದ್ದಾರೆ. ಮಾ ನಿಷಾದ, ಉಭಯಕುಲ ಬಿಲ್ಲೋಜ, ನಳಿನಾಕ್ಷಿ ನಂದಿನಿ, ಮೇಘ ಮಯೂರಿ, ಸ್ವರ್ಣನೂಪುರ, ದಳವಾಯಿ ಮುದ್ದಣೆ, ಕುಡಿಯನ ಕೊಂಬಿರೆಲ್, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್, ಸ್ವರ್ಣಕೇದಗೆ ಮುಂತಾದ ಪ್ರಸಂಗಗಳು ಯಕ್ಷ ರಂಗದಲ್ಲಿ ಜನಪ್ರಿಯವಾಗಿವೆ. ಇವರಿಗೆ ಮುದ್ದಣ ಪ್ರಶಸ್ತಿ, ಮುಂಬೈನ ಯಕ್ಷ ಮಾನಸ ಪ್ರಶಸ್ತಿ, ಅಕಾಡೆಮಿ ಪುಸ್ತಕ ಸಾಹಿತ್ಯ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಕರ್ನೂರು ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳು ಲಭಿಸಿವೆ. ಪೂಂಜ ಅವರು ತಮ್ಮ ಮನೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದರು.
- +91 73497 60202
- [email protected]
- December 4, 2024 1:56 PM