ಟೋಕಿಯೋ: ಟೊಕಿಯೋ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟ ಅಥ್ಲೀಟ್ ನೀರಜ್ ಚೋಪ್ರಾ ಕುರಿತು ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ದೇಶದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಜತೆ ಜತೆಗೆ ಬಂಪರ್ ಆಫರ್ ಗಳೂ ಬರುತ್ತಿವೆ. ಯಾಕೆಂದರೆ ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕ ಬಂದಿರಲಿಲ್ಲ. ಅದೂ ಈ ಬಾರಿ ಬಂಗಾರದ ಪದಕ ಬಂದಿರುವುದು ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ.
ನೀರಜ್ ಚೋಪ್ರಾಗೆ ಹರ್ಯಾಣ ಸರ್ಕಾರ 6 ಕೋಟಿ ನಗದು ಪುರಸ್ಕಾರ ಮತ್ತು ಗ್ರೇಡ್ ‘ಎ’ ಸರ್ಕಾರಿ ನೌಕರಿಯನ್ನು ಘೋಷಿಸಿದೆ. ಭಾರತದ ಖ್ಯಾತ ಮೋಟಾರ್ ಸಂಸ್ಥೆ ಆನಂದ್ ಮಹೀಂದ್ರದಿಂದಲೂ ನೀರಜ್ಗೆ ಭರ್ಜರಿ ಬಹುಮಾನಗಳ ಆಫರ್ ಬಂದಿದೆ. ಮಹೀಂದ್ರ ಸಂಸ್ಥೆಯ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರ ಅವರು, ಗೋಲ್ಡನ್ ಅಥ್ಲೀಟ್ ನೀರಜ್ ಚೋಪ್ರಾಗೆ ಎಕ್ಸ್ಯುವಿ 700 ವಾಹನ ನೀಡಲು ಮುಂದಾಗಿದ್ದಾರೆ. ಈ ಕುರಿತು ಆನಂದ್ ಮಹೀಂದ್ರ ಅವರು ಟ್ವೀಟ್ ಮಾಡಿ ಈ ರೀತಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.