ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತೊಡಿಕಾನ ಗ್ರಾಮದ ಮುಪ್ಪಸೇರು ಎಂಬಲ್ಲಿ ರೈತರ ತೋಟಗಳಿಗೆ ಕಾಡಾನೆಗಳು ದಾಳಿ ಮಾಡಿ ಬಾಳೆ, ತೆಂಗಿನ ಮರಗಳನ್ನು ನಾಶ ಪಡಿಸಿವೆ. ಇಲ್ಲಿಯ ವೇದಾವತಿ ಎಂಬವರ ಜಾಗಕ್ಕೆ ನುಗ್ಗಿದ ಕಾಡಾನೆಗಳು ನಾಲ್ಕು ತೆಂಗಿನ ಮರ, 5 ಬಾಳೆ ಗಿಡ ಹಾಗೂ ಪಕ್ಕದ ರಾಮಕೃಷ್ಣ ಎಂಬವರ ಜಾಗಕ್ಕೆ ನುಗ್ಗಿದ ಕಾಡಾನೆಗಳು ಎರಡು ತೆಂಗಿನ ಮರ ಮುರಿದು ಹಾಕಿವೆ. ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ನಿರ್ಮಿಸಲಾಗಿದ್ದು ಅದನ್ನು ಲೆಕ್ಕಿಸದೆ ಅದರ ಮೂಲಕವೇ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆ.
ಈಡೇರದ ಬೀದಿ ದೀಪ ಬೇಡಿಕೆ
ಮುಪ್ಪಸೇರು ಭಾಗ ಅರಣ್ಯದಂಚಿನ ಭಾಗವಾಗಿದೆ. ಇಲ್ಲಿ ಪ್ರತಿ ವರ್ಷ ಕಾಡಾನೆಗಳ ಕಾಟ ಜಾಸ್ತಿಯಾಗಿದ್ದು ಸೋಲರ್ ಬೀದಿ ದೀಪಗಳನ್ನು ಒದಗಿಸಿ ಕೊಡಬೇಕೆಂದು ಎರಡು ವರ್ಷದ ಹಿಂದೆ ತೊಡಿಕಾನ ಶಾಲೆಯಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ಪಂಚಾಯತ್ ಅಧಿಕಾರಿಗಳು ಒದಗಿಸಿ ಕೊಡುವ ಭರವಸೆ ನೀಡಿದ್ದರು.ಬಳಿಕ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸೋಲಾರ್ ಬೀದಿ ದೀಪದ ಬೇಡಿಕೆ ಇಡೇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.