ಸುಳ್ಯ: ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಅವರ ಪತ್ನಿ ಡಾಟಿ ಸದಾನಂದ ಗೌಡರವರು ಭೇಟಿ ನೀಡಿದರು. ದೇವರಗುಂಡ ಮನೆಯಿಂದ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಸಂಘಕ್ಕೆ ಭೇಟಿ ನೀಡಿದ ಸದಾನಂದ ಗೌಡರನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಮತ್ತು ಡಾಟಿಸದಾನಂದ ಗೌಡರವರಿಗೆ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಸಂಘದ ಬ್ಯಾಂಕಿಂಗ್ ವಿಭಾಗಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಳಿಕ ಮಾತನಾಡಿದ ಸದಾನಂದ ಗೌಡ ಅವರು “ಬಹಳ ದಿನಗಳ ಬಳಿಕ ನಿಮ್ಮನ್ನೆಲ್ಲ ಭೇಟಿ ಮಾಡುತ್ತಿದ್ದೇನೆ. ಈ ಭೇಟಿಯು ಚಾಯ್ ಪೇ ಚರ್ಚಾ ಆಗಲಿ” ಎಂದರು. ಹಳದಿ ರೋಗದ ನಿವಾರಣೆಗೆ ಸರಕಾರವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಅಡಿಕೆ ಕೃಷಿಕರ ನೆರವಿಗಾಗಿ ಸರಕಾರದ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಹೇಳಿದರು. ಅಡಿಕೆ ಬೆಳೆದ ಕೃಷಿಕನಿಗೆ ಪರ್ಯಾಯ ಬೆಳೆಗೆ ಆರ್ಥಿಕವಾಗಿ ಹೊಂದಿಕೊಳ್ಳುವುದು ತ್ರಾಸದಾಯಕವಾದರೂ ಅಡಿಕೆ ಎಲೆ ಹಳದಿ ರೋಗವು ವ್ಯಾಪಕವಾಗಿ ಹಬ್ಬಿದ್ದು ಪರ್ಯಾಯ ಬೆಳೆ ಅನಿವಾರ್ಯ ಎಂದರು. ಕಾಡಾನೆ ಹಾವಳಿ, 110 ಕೆ.ವಿ. ಅನುಷ್ಟಾನದಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಮತ್ತು ಬಿಎಸ್.ಎನ್.ಎಲ್. ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಂಬಂಧಪಟ್ಟ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು. ಸಹಕಾರ ಸಂಘದ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೇವೆ, ಆಂಬ್ಯುಲನ್ಸ್ ಸೇವೆ ಮತ್ತು ಒಟ್ಟಾರೆ ಕಾರ್ಯವೈಖರಿಯ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರುಗಳಾದ ವಿನೋದ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ಸೋಮಯ್ಯ ಹೆಚ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಣಿ ದೇರಾಜೆ, ಉಪಾಧ್ಯಕ್ಷರಾದ ಶ್ವೇತಾ ಅರಮನೆಗಯ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ, ಪುಷ್ಪಾಧರ ಕೊಡೆಂಕೇರಿ, ಮಾಲಿನಿ ಉಳುವಾರು, ವೆಂಕಟ್ರಮಣ ಪೆತ್ತಾಜೆ, ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರಾದ ಚಿತ್ತರಂಜನ್ ಕಟ್ಟಕೋಡಿ, ಮಹಿಳಾ ಯುವ ಮೋರ್ಚಾ ಕಾರ್ಯದರ್ಶಿಯಾದ ಗೀತಾ ಶೇಖರ್ ಉಳುವಾರು, ಸಂಘದ ಮಾಜಿ ನಿರ್ದೇಶಕರಾದ ವಾರಿಜಾ ಕುರುಂಜಿ, ನಾರಾಯಣ ಕೆ.ಕೆ., ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.