ಬೆಂಗಳೂರು: 2021 ರ ಅಂತ್ಯದ ವೇಳೆಗೆ 1.5 ಲಕ್ಷ ಭಾರತೀಯರಿಗೆ ಕರೋನಾ ಲಸಿಕೆ ಹಾಕಿಸುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆಯಾಗಿರುವ ರಾಬಿನ್ಹುಡ್ಆರ್ಮಿ(ಆರ್ಎಚ್ಒ) ವಾಟ್ಸಪ್, ಉಬರ್ ಮತ್ತು ಗೂಗಲ್ ಜತೆ ಕೈಜೋಡಿಸಿದೆ. ಈ ಉಪಕ್ರಮಕ್ಕೆ #mission28states ಎಂದು ಹೆಸರಿಡಲಾಗಿದೆ. ದೇಶದ 28 ರಾಜ್ಯಗಳಲ್ಲಿ ಆರ್ಎಚ್ಎ ಸ್ವಯಂಸೇವಕರು ಸ್ಥಳೀಯ ಸಂಸ್ಥೆಗಳ ಜತೆಗೂಡಿ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಮಾರಣಾಂತಿಕ ಸಾಂಕ್ರಾಮಿಕದ ಮೂರನೇ ಅಲೆ ಬರುವ ಮುನ್ನ ಎಲ್ಲರಿಗೂ ಲಸಿಕೆ ಹಾಕಿಸುವ ಪ್ರಯತ್ನವನ್ನು ನಡೆಸಲಿದೆ. ಆರ್ಎಚ್ಒದ ಪ್ರತಿಯೊಂದು ಉಪಕ್ರಮಗಳು ಸಂಪೂರ್ಣ ಉಚಿತವಾಗಿ ನಡೆಯುವ ರೀತಿಯಲ್ಲಿಯೇ ಈ ಲಸಿಕಾಕರಣ ಉಪಕ್ರಮವು ಜಾರಿಗೆ ಬರಲಿದೆ. ದೇಶಾದ್ಯಂತ #mission28states ಮೂಲಕ ತಂತ್ರಜ್ಞಾನ ಪಾಲುದಾರರೊಂದಿಗೆ ಸೇರಿ ಲಸಿಕೆ ಅಭಿಯಾನವನ್ನು ನಡೆಸಲಿದೆ.
ಉಬರ್, ಗೂಗಲ್ ಸಹಭಾಗಿತ್ವ: ಈ ಬಗ್ಗೆ ಮಾತನಾಡಿದ ರಾಬಿನ್ಹುಡ್ ಆರ್ಮಿಯ ಸಂಸ್ಥಾಪಕ ನೀಲ್ ಘೋಷ್ ಅವರು,“ಈ ಸಾಂಕ್ರಾಮಿಕವು ಲಕ್ಷಾಂತರ ಕುಟುಂಬಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ಮತ್ತು ಆಡಳಿತಗಳು ಈ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಅತ್ಯುತ್ತಮ ರೀತಿಯಲ್ಲಿ ಪ್ರಯತ್ನಪಡುತ್ತಿವೆ. ಇದೇ ಸಂದರ್ಭದಲ್ಲಿ ನಾಗರಿಕ ಸಮಾಜವು ಮುಂದೆ ಬರಬೇಕು ಮತ್ತು ನಮ್ಮ ಪ್ರತಿಭೆ ಹಾಗೂ ಸಂಪನ್ಮೂಲವನ್ನು ಕೊಡುಗೆಯಾಗಿ ನೀಡುವುದು ಅತ್ಯಂತ ಪ್ರಮುಖವಾಗಿದೆ. ಸ್ವಾತಂತ್ರ್ಯೋತ್ಸವ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಾಟ್ಸಪ್, ಉಬರ್ ಮತ್ತು ಗೂಗಲ್ ಬೆಂಬಲದೊಂದಿಗೆ ರಾಬಿನ್ಹುಡ್ #mission28states ಮೂಲಕ 1.5 ಲಕ್ಷ ಜನರಿಗೆ ಕೋವಿಡ್-19 ಲಸಿಕೆಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ. ಈ ಅಭಿಯಾನ ಜುಲೈ 31 ರಂದು ಆರಂಭವಾಗಿದ್ದು, ಆಗಸ್ಟ್ 15 ರವರೆಗೆ ನಡೆಯಲಿದೆ. ಇದರ ಜತೆಗೆ ಕನಿಷ್ಠ 5 ಮಿಲಿಯನ್ ಊಟವನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿದೆ. ರಾಬಿನ್ಹುಡ್ ಆರ್ಮಿಯಲ್ಲಿ ನಾವು ನಾಗರಿಕ ಸಮಾಜ ಮತ್ತು ಪ್ರಮುಖ ತಂತ್ರಜ್ಞಾನ ಪಾಲುದಾರರನ್ನು ಒಟ್ಟುಗೂಡಿಸಲು ಕೋವಿಡ್-19 ವಿರುದ್ಧದ ಪ್ರಚಾರವನ್ನು ಹೆಚ್ಚಿಸಲು ಮತ್ತು ದೇಶದ ಪ್ರತಿಯೊಂದು ರಾಜ್ಯದಲ್ಲೂ ಪ್ರಭಾವವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಬೃಹತ್ ಪ್ರಯತ್ನವನ್ನು ನಡೆಸುತ್ತಿದ್ದೇವೆ’ ಎಂದರು.