ಬೆಂಗಳೂರು: ಪ್ರೊ ಕಬಡ್ಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಕೊರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ನಡೆಸಲಾಗದ ಪ್ರೊ ಕಬಡ್ಡಿ ಎಂಟನೇ ಆವೃತ್ತಿಯನ್ನು ನಡೆಸುವುದಕ್ಕೆ ಪೂರ್ಣ ತಯಾರಿ ಮಾಡಿಕೊಂಡಿರುವುದಾಗಿ ಕೂಟದ ನೇರ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ನ್ಯೂಸ್ ನಾಟೌಟ್ ಗೆ ಖಚಿತಪಡಿಸಿದೆ.
8ನೇ ಆವೃತ್ತಿ, 12 ಫ್ರಾಂಚೈಸಿ, ಹರಾಜಿನಲ್ಲಿ 500 ಆಟಗಾರರು: ಎರಡು ವರ್ಷದ ಬಳಿಕ 8ನೇ ಆವೃತ್ತಿ ಕೂಟವನ್ನು ಆಯೋಜಿಸಲು ಸಾಧ್ಯವಾಗುತ್ತಿದೆ. ಒಟ್ಟು 12 ಫ್ರಾಂಚೈಸಿಗಳು ಈ ಸಲ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಫ್ರಾಂಚೈಸಿಗೂ ಗರಿಷ್ಠ ಎಂದರೆ 4.4 ಕೋಟಿ ರೂ. ಖರ್ಚು ಮಾಡಲು ಅವಕಾಶವಿದೆ. ಆಗಸ್ಟ್ 29 -31 ರ ತನಕ ಹರಾಜು ಪ್ರಕ್ರಿಯೆ ನಡೆಯಲಿದೆ. ಆಟಗಾರರನ್ನು ಎ, ಬಿ, ಸಿ ಹಾಗೂ ಡಿ ಎಂದು ನಾಲ್ಕು ಗುಂಪುಗಳಾಗಿ ವರ್ಗಿಕರಿಸಿಕೊಳ್ಳಲಾಗಿದೆ. ಎ ಕೆಟಗೆರಿ ಆಟಗಾರರಿಗೆ ಮೂಲಬೆಲೆ 30 ಲಕ್ಷ ರೂ, ಉಳಿದಂತೆ ಮೂರು ಗುಂಪುಗಳ ಆಟಗಾರರಿಗೆ ಕ್ರಮವಾಗಿ 20 , 10 ಹಾಗೂ 6 ಲಕ್ಷ ರೂ. ಮೂಲ ಬೆಲೆ ನೀಡಲಾಗುತ್ತದೆ ಎಂದು ನ್ಯೂಸ್ ನಾಟೌಟ್ ಗೆ ಸ್ಟಾರ್ ಸ್ಪೋರ್ಟ್ಸ್ ಮೂಲಗಳು ಮಾಹಿತಿ ನೀಡಿವೆ.