ಬೆಳಗಾವಿ: ಜೈಲಿನೊಳಗೆ ಜೀವನ ಹೇಗಿರುತ್ತದೆ, ಅಲ್ಲಿ ಕೈದಿಗಳು ಯಾವ ರೀತಿ ಇರುತ್ತಾರೆ ಅನ್ನುವ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇರುತ್ತದೆ. ಆದರೆ ಜೈಲಿನ ಒಳಗೆ ಹೇಗಪ್ಪ ಹೋಗುವುದು. ಜನ ಏನ್ ಅಂದುಕೊಳ್ಳುತ್ತಾರೋ ಏನೊ ಅನ್ನುವ ಹಿಂಜರಿಕೆಯೂ ಇರುತ್ತದೆ. ಅದೇನೆ ಇರಲಿ ಒಂದು ಸಲ ಕೈದಿಗಳ ಕಷ್ಟವನ್ನು ನೋಡಬೇಕು ಅಂತ ಬಯಸುವವರಿಗೆ ಈಗ ಇಲ್ಲೊಂದು ಅವಕಾಶ ಇದೆ.
ಏನಿದು ಜೈಲು ವಾಸ ಅವಕಾಶ?
ಬೆಳಗಾವಿ ಜಿಲ್ಲೆಯ ಹಿಂಡಲಗ ಕೇಂದ್ರೀಯ ಕಾರಾಗೃಹದ ಅಧಿಕಾರಿಗಳು, ‘ಖೈದಿಗಳ ಜೀವನದಲ್ಲಿ ಒಂದು ದಿನ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಯೋಜನೆಯನ್ನು ಆರಂಭಿಸಿದ್ದಾರೆ. ಈ ಹೊಸ ಯೋಜನೆಯಲ್ಲಿ 24 ಗಂಟೆಗಳ ಬಂಧನದ ಅನುಭವವನ್ನು ಪ್ರವಾಸಿಗರಿಗೆ ನೀಡಲಾಗುತ್ತದೆ. ಕಂಬಿ ಹಿಂದೆ ಕಳೆಯುವ ಅನುಭವವನ್ನು ಅಧಿಕಾರಿಗಳು ಜನರಿಗೆ ಕೊಡಲಿದ್ದಾರೆ. ಜೈಲು ಜೀವನದ ಅನುಭವ ಪಡೆಯಲಿಚ್ಛಿಸುವ ಜನರು ರೂ.500 ನೀಡಿ, ಜೈಲಿನಲ್ಲಿ ಒಂದು ದಿನ ಕಾಲ ಕಳೆಯಬಹುದಾಾಗಿದೆ. ಈಗಾಗಲೇ ಯೋಜನೆಗೆ ಸಿದ್ಧತೆ ನಡೆಸಿರುವ ಅಧಿಕಾರಿಗಳು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆಂದು ತಿಳಿದುಬಂದಿದೆ.