ಬೆಳಗಾವಿ: ಇಲ್ಲಿನ ಒಂದು ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲಾ. ಆದರೆ, ಮೊಹರಂ ಹಬ್ಬವನ್ನು ಕಳೆದ 11 ವರ್ಷಗಳಿಂದಲೂ ಆಚರಿಸುತ್ತಾ ಬರಲಾಗುತ್ತಿದೆ. ಹಿಂದೂಗಳೇ ದೇಣಿಗೆ ಸಂಗ್ರಹಿಸಿ ‘ಫಕೀರ್ ಸ್ವಾಮಿ’ ದರ್ಗಾ ನಿರ್ಮಿಸಿದ್ದಾರೆ. ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮ ಹಿಂದೂ -ಮುಸ್ಲಿಂ ಸಾಮರಸ್ಯದ ಸಂಕೇತದಂತಿದ್ದು ಮಾದರಿಯಾಗಿದೆ.
ಪ್ರತಿ ವರ್ಷ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು ಸೂಚಿಸುವ ಮೊಹರಂ ಅನ್ನು ಆಚರಿಸುತ್ತಾರೆ. ಈ ಬಾರಿ ಕೋವಿಡ್-19 ನಿಯಮ ಪಾಲನೆಯೊಂದಿಗೆ ಸರಳವಾಗಿ ಆಚರಿಸಲಾಯಿತು. ಮೆರವಣಿಗೆ ನಂತರ ಪಂಜಾವನ್ನು ತಯಾರಿಸಿ ದರ್ಗಾದಲ್ಲಿ ಇಡಲಾಯಿತು. ದರ್ಗಾ ನಿರ್ಮಾಣವಾದಾಗಿನಿಂದಲೂ ಹಿಂದೂ ಆರ್ಚಕರೊಬ್ಬರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ದರ್ಗಾದ ಆವರಣದಲ್ಲಿರುವ ಬೇವಿನ ಮರವು ಹಾವು ಕಡಿತದಿಂದ ಬಳಲುತ್ತಿರುವವರಿಗೆ ಜೀವರಕ್ಷಕ ಎಂದು ನಂಬಲಾಗಿದೆ. ಗ್ರಾಮಸ್ಥರ ಪ್ರಕಾರ, ಬೇವಿನ ಎಲೆಯನ್ನು ಬಳಸಿ ತಯಾರಿಸಿದ ರಸವನ್ನು ಸೇವಿಸಿದ ಎರಡು ಗಂಟೆಗಳಲ್ಲಿ ಹಾವು ಕಡಿತವು ಗುಣವಾಗುತ್ತದೆ. ಬೆಳಗಾವಿಯ ಹೊರತಾಗಿ ಧಾರವಾಡ ಮತ್ತು ಗದಗ ಜಿಲ್ಲೆಗಳ ಹಾವು ಕಡಿತಕ್ಕೆ ಒಳಗಾದವರು ಕೂಡ ಆಗಾಗ್ಗ ದರ್ಗಾಕ್ಕೆ ಭೇಟಿ ನೀಡುತ್ತಾರೆ. 3,500 ಜನಸಂಖ್ಯೆಯಿರುವ ಹರ್ಲಾಪುರ ಗ್ರಾಮದಲ್ಲಿ ಅನೇಕ ದಶಗಳಿಂದಲೂ ಮೊಹರಂ ಆಚರಿಸುತ್ತಾ ಬರಲಾಗಿದೆ. ಪ್ರಸಿದ್ಧ ಯಲ್ಲಮ್ಮ ಗುಡ್ಡದ ರೇಣುಕಾ ದೇವಿ ದೇವಾಲಯಕ್ಕೆ ಆಗಮಿಸುವ ಭಕ್ತರು ಕೂಡಾ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ದರ್ಗಾಕ್ಕೆ ಭೇಟಿ ನೀಡುವ ಯಾವುದೇ ಭಕ್ತರ ಆಶಯಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಇದೆ.