ಲಂಡನ್: ಎಂಟು ತಿಂಗಳ ಪುಟ್ಟ ಮಗುವಿನ ಜೀವ ಉಳಿಸುವುದಕ್ಕೆ ಪೋಲೆಂಡ್ ಜಾವೆಲಿನ್ ಸ್ಪರ್ಧಿ ಮರಿಯಾ ಆಂಡ್ರೆಜಿಕ್ ತಾನು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನೇ ಹರಾಜಿಗಿಟ್ಟು ಸುದ್ದಿಯಾಗಿದ್ದಾರೆ. ಪದಕಗಳಿಂದ ಆಚೆಗೆ ಒಂದು ಮಾನವೀಯತೆ ಮೌಲ್ಯಗಳ ಸಂದೇಶವನ್ನು ಜಗತ್ತಿಗೆ ಮರಿಯಾ ಸಾರಿದ್ದಾರೆ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗಬೇಕು ಅನ್ನುವ ಸಂದೇಶಕ್ಕೆ ಜಗತ್ತಿನಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಏನಿದು ವಿಷಯ?
ಎಂಟು ತಿಂಗಳ ಪೋಲೆಂಡ್ನ ಮಗು ಮಿಲೋಜೆಕ್ ಮಾಲಿಸಾ ಅಪರೂಪದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಅಂದಾಜು ವೆಚ್ಚ ಸುಮಾರು 2.86 ಕೋಟಿ ರೂ. ತಗುಲಬಹುದು. ತೀರ ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಯುರೋಪ್ನಾದ್ಯಂತ ವೈದ್ಯರು ಚಿಕಿತ್ಸೆಗೆ ಮುಂದೆ ಬಂದಿಲ್ಲ. ಮಗುವನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯ ಮೆಡಿಕಲ್ ಸೆಂಟರ್ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಒಪ್ಪಿಕೊಂಡಿದ್ದಾರೆ. ಈಗಾಗಲೇ ಕುಟುಂಬ ವರ್ಗದವರು ಮಗುವಿನ ಜೀವ ಉಳಿಸುವುದಕ್ಕೆ ಆನ್ಲೈನ್ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ.
ಮರಿಯಾ ಸಹಾಯ ಹಸ್ತ
ದುಬಾರಿ ಮೊತ್ತದ ಶಸ್ತ ಚಿಕಿತ್ಸೆ ಆಗಿರುವುದರಿಂದ ಇನ್ನೂ ಸಾಕಷ್ಟು ಹಣ ಬೇಕಾಗಿದೆ. ಈ ವಿಷಯವನ್ನು ಅರಿತ ಅಥ್ಲೀಟ್ ಮರಿಯಾ ಆಂಡ್ರೆಜಿಕ್ ತನ್ನ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕವನ್ನು ಹರಾಜಿಗಿಡುವ ನಿರ್ಧಾರ ಮಾಡಿದ್ದಾರೆ. ಸ್ವತಃ ಅವರ ಫೇಸ್ ಬುಕ್ನಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಆ ಬಳಿಕ ಹರಾಜು ನಡೆಸಲಾಗಿ 92 ಲಕ್ಷಕ್ಕೆ ಪದಕ ಹರಾಜುಗೊಂಡಿದೆ.
ಹರಾಜಿನಲ್ಲಿ ಗೆದ್ದವ ವಾಪಸ್ ಕೊಟ್ಟ
ಪೋಲೆಂಡ್ನ ಸೂಪರ್ ಮಾರ್ಕೆಟ್ ನ ಉದ್ಯಮಿ ಜಬ್ಕಾ ಪೊಲ್ಸಾಕ ಪದಕವನ್ನು ಹರಾಜಿನಲ್ಲಿ ಪಡೆದುಕೊಂಡರು. ಮರಿಯಾ ಮಾದರಿ ನಡೆಯ ಬಗ್ಗೆ ತಿಳಿದ ನಂತರ ಪದಕವನ್ನು ಅವರು ಮನೆಗೆ ಕೊಂಡು ಹೋಗಲು ಅವರಿಗೆ ಮನಸ್ಸು ಬರಲಿಲ್ಲ. ಹೀಗಾಗಿ ಅವರು ಅದನ್ನು ಮರಳಿ ಮರಿಯಾ ಅವರಿಗೇ ನೀಡಿದ್ದಾರೆ. ತಾನು ಹಣವನ್ನು ನೀಡುತ್ತೇನೆ ಆದರೆ ಪದಕ ನಿಮ್ಮ ಬಳಿಯೇ ಇರಲಿ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಜಬ್ಕಾ , ಮರಿಯಾ ನಮ್ಮ ದೇಶದ ಹೆಮ್ಮೆ. ಅವರು ಒಂದೊಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಸಾಮಾಜಿಕ ಕಾರ್ಯದ ವಿಚಾರವನ್ನು ತಿಳಿದು ಮನಸ್ಸು ಮಮ್ಮುಲ ಮರುಗಿತು, ಅವರಿಂದ ಪದಕವನ್ನು ಹಣ ನೀಡಿ ಕಿತ್ತು ಕೊಳ್ಳಲು ನನಗೆ ಮನಸ್ಸು ಬರಲಿಲ್ಲ. ಹೀಗಾಗಿ ಅವರಿಗೆ ಪದಕ ನೀಡಿದ್ದೇನೆ. ಮಗುವಿನ ಚಿಕಿತ್ಸೆಗೆ ಅಗತ್ಯವಿರುವ ಒಂದೊಳ್ಳೆಯ ಮೊತ್ತವನ್ನು ನಾನೇ ಕೊಡುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ ಎಂದು ಜಾಲತಾಣದಲ್ಲಿ ಪ್ರಕಟಿಸಿಕೊಂಡಿದ್ದಾರೆ.
ಕ್ಯಾನ್ಸರ್ ಗೆದ್ದಿದ್ದ ಮರಿಯಾ..!
ಪೋಲೆಂಡ್ನ ಸ್ಟಾರ್ ಅಥ್ಲೀಟ್ ಮರಿಯಾ ಆಂಡ್ರೆಜಿಕ್. ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೃತ್ತಿ ಜೀವನದ ಮೊದಲ ಒಲಿಂಪಿಕ್ಸ್ ಗೆದ್ದಿದ್ದ ಮರಿಯಾ ಅವರಿಗೆ 2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಜಸ್ಟ್ ಮಿಸ್ ಆಗಿತ್ತು. ಇದಾದ ಬಳಿಕ 2018ರಲ್ಲಿ ಅವರಿಗೆ ಮೂಳೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಮುಂದೆ ಕ್ರೀಡಾ ಜೀವನವೇ ಮುಗಿದು ಹೋಯಿತು ಅಂತ ಅಂದುಕೊಳ್ಳುವಷ್ಟರಲ್ಲಿ ಮರಿಯಾ ಫಿನಿಕ್ಸ್ ನಂತೆ ಜಿಗಿದು ಬಂದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಕ್ಯಾನ್ಸರ್ ವಿರುದ್ಧ ಗರ್ಜಿಸಿ ಜೀವನ ಗೆದ್ದಿದ್ದರು. ಅಂತಹ ತಾರೆ ತಾನು ಗೆದ್ದ ಪದಕವನ್ನು ಮಗುವಿನ ಜೀವನ ರಕ್ಷಿಸುವುದಕ್ಕಾಗಿ ನೀಡಿರುವ ಮಾನವೀಯ ಕಾರ್ಯಕ್ಕೆ ವಿಶ್ವದಾದ್ಯಂತ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.