ಭುವನೇಶ್ವರ: ಹಣದ ಹೊಳೆಯೇ ಹರಿಯುವ ಕ್ರಿಕೆಟ್ ಹಿಂದೆ ಎಲ್ಲ ಪ್ರಾಯೋಜಕರೂ ಓಡುತ್ತಾರೆ. ಆದರೆ ಹಾಕಿಯಂತಹ ದೇಶಿ ಮಣ್ಣಿನ ಕ್ರೀಡೆಗೆ ಸರಿಯಾಗಿ ಪ್ರಾಯೋಜಕರೇ ಸಿಗುವುದಿಲ್ಲ. ಇದು ನಮ್ಮ ದೇಶದ ದುರಾದೃಷ್ಟವೇ ಸರಿ. ಇದೆಲ್ಲದರ ನಡುವೆಯೂ ಭಾರತ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮೆರೆದಿದೆ. ಕಂಚಿನ ಹೋರಾಟದಲ್ಲಿ ಸೋತರೂ ಭಾರತೀಯ ಮಹಿಳಾ ತಂಡ ಚಿನ್ನದ ಹೊಳಪಿನ ಪ್ರದರ್ಶನ ನೀಡಿದೆ. ಕೋಟ್ಯಂತರ ಯುವ ಸಮುದಾಯದಲ್ಲಿ ಸ್ಫೂರ್ತಿಯ ಬೀಜ ಬಿತ್ತಿದೆ. ಸುಮಾರು ನಲವತ್ತು ವರ್ಷದ ಬಳಿಕ ಭಾರತದಿಂದ ಒಲಿಂಪಿಕ್ಸ್ ನಲ್ಲಿ ಇಂತಹದ್ದೊಂದು ದೊಡ್ಡ ಸಾಧನೆ ಮೂಡಿ ಬಂದಿದೆ.
ಇದಕ್ಕೆಲ್ಲ ಕಾರಣ ಯಾರಾಗಿರಬಹುದು ಅನ್ನುವುದನ್ನು ಹುಡುಕುತ್ತಾ ಹೋದಾಗ ಸಿಗುವ ಉತ್ತರವೇ ಒಬ್ಬರು ಮುಖ್ಯಮಂತ್ರಿ..! ಹೌದು, ಅವರೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್. ಭಾರತ ಹಾಕಿಯನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದ ಸಮಯದಲ್ಲಿಯೇ ಅವರು ಹಾಕಿ ಇಂಡಿಯಾದೊಂದಿಗೆ 100 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ಪುರುಷರ ಹಾಗೂ ಮಹಿಳಾ ತಂಡಕ್ಕೆ ಪ್ರಾಯೋಜಕತ್ವ ನೀಡಿದರು. 2018ರಲ್ಲಿ ಅವರು ತೆಗೆದುಕೊಂಡ ಒಂದು ನಿರ್ಧಾರ ಇಂದು ಫಲ ನೀಡಿದೆ. ಪ್ರತಿಯೊಬ್ಬ ರಾಜಕಾರಣಿಯೂ ತನ್ನ ಅಧಿಕಾರವಧಿಯಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡಿದ್ದೇ ಆದರೆ ದೇಶದ ಅಭಿವೃದ್ಧಿ ಆಗುತ್ತದೆ ಅನ್ನುವುದಕ್ಕೆ ಇದೊಂದು ಪ್ರತ್ಯಕ್ಷ ಉದಾಹರಣೆ.