ನವದೆಹಲಿ: ಐಸಿಎಸ್ ಉಗ್ರರು ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಾಂಬ್ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ದಾಳಿಯನ್ನು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ರಾಷ್ಟ್ರಗಳು ಖಂಡಿಸಿವೆ. ಈ ದಾಳಿಯ ರೂವಾರಿಗಳು ಐಸಿಸ್ ಉಗ್ರರಾಗಿದ್ದರೂ ದಾಳಿಯ ಮಾಸ್ಟರ್ ಮೈಂಡ್ ಕೇರಳದ 14 ಮಂದಿ ಅನ್ನುವುದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಜಾರಿಯಾಗಿ 15 ದಿನ ಕಳೆದಿಲ್ಲ. ಅಷ್ಟರಲ್ಲೇ ಹೆಣಗಳ ರಾಶಿ ಬಿದ್ದಿದೆ. ಐಸಿಸ್ ಉಗ್ರರ ಬಾಂಬ್ ದಾಳಿಗೆ ಅಫ್ಘಾನಿಸ್ತಾನದ 170 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 13 ಅಮೆರಿಕ ಸೈನಿಕರು ಸೇರಿದ್ದಾರೆ. ಈ ಬಾಂಬ್ ದಾಳಿ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತು ಕೊಂಡಿದೆ. ಇದೀಗ ಈ ಬಾಂಬ್ ದಾಳಿ ಹಿಂದೆ ಕೇರಳದಿಂದ ಐಸಿಸ್ ಸೇರಿದ 14 ಮಂದಿ ಶಾಮೀಲಾಗಿದ್ದಾರೆ ಅನ್ನುವ ವರದಿಯನ್ನು ಪ್ರಕಟಿಸಿದೆ. ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಕೇರಳದಿಂದ ಐಸಿಸ್ ಕೆ ಉಗ್ರ ಸಂಘಟನೆ ಸೇರಿದ 14 ಉಗ್ರರು ಸಂಪರ್ಕಿಸಿದ್ದಾರೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ವರದಿ ಹೊರ ಬಿದ್ದ ಬೆನ್ನಲ್ಲೇ ಭಾರತದ ಆತಂಕ ಹೆಚ್ಚಾಗಿದೆ. ಕೇರಳದಿಂದ ಉಗ್ರ ಸಂಘಟನೆ ಸೇರಿಕೊಂಡ ಉಗ್ರರನ್ನು ಭಾರತದ ವಿರುದ್ಧ ವಿದ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಲಾಗಿದೆ.