ಪುತ್ತೂರು: ಮಹಿಳೆಯರಿಗೆ ಚಿನ್ನವೆಂದರೆ ಪಂಚಪ್ರಾಣ. ಅದರಲ್ಲೂ ಮಾಂಗಲ್ಯ ಸರ ಸದಾ ಮಿರಿ..ಮಿರಿ ಮಿನುಗುತಿರಬೇಕು ಅಂತ ಸದಾ ಆಸೆ ಪಡುತ್ತಾರೆ. ಹೀಗೆಯೇ ಆಸೆ ಪಡುತ್ತಿದ್ದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಸದಸ್ಯೆಯಾಗಿರುವ ಪೆರ್ನಾಜೆ ನಿವಾಸಿ ಇಂದಿರಾ ಅವರಿಗೆ ಕಳ್ಳನೊಬ್ಬ ಮಹಾ ಮೋಸ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಚಿನ್ನವನ್ನು ಮಿರಿ..ಮಿರಿ ಮಿಂಚುವಂತೆ ಮಾಡಿಕೊಡುತ್ತೇನೆ ಎಂದು ಕಳ್ಳ ಆಸೆ ತೋರಿಸಿದ್ದಾರೆ. ಇದನ್ನು ನಂಬಿದ ಅವರು ತಮ್ಮ ಐದೂವರೆ ಪವನ್ ಚಿನ್ನದ ಸರ, ಬಳೆಯನ್ನು ನೀಡಿದ್ದಾರೆ. ಆತ ಅದನ್ನು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ.
ಏನಿದು ಘಟನೆ?
ಆಭರಣಗಳನ್ನು ತೆಗೆದುಕೊಂಡ ವ್ಯಕ್ತಿ ಅದರ ಮೇಲೆ ಹಳದಿ ಪೌಡರ್ ಸುರಿದು, ಲಿಕ್ವಿಡ್ ಹಾಗೂ ಜೆಲ್ ಹಾಕಿ ಬ್ರಷ್ ಬಳಸಿ ತೊಳೆಯುವಂತೆ ನಟಿಸಿ ನಂತರ ಬ್ಯಾಟರಿ ಚಾಲಿತ ಬೆಂಕಿ ನೀರಿನಲ್ಲಿ ಕುದಿಸಿದ್ದಾನೆ. ಬಳಿಕ ನೀರಿನಿಂದ ತೊಳೆದು ಅದಕ್ಕೆ ಅರಶಿನ ಪುಡಿ ಹಾಕಿ, ಪೇಪರ್ ನಲ್ಲಿ ಪೊಟ್ಟಣ ಕಟ್ಟಿ, ಅರ್ಧ ಗಂಟೆಯ ಬಳಿಕ ಪೊಟ್ಟಣ ತೆರೆಯುವಂತೆ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.ಘಟನೆಯ ಬಗ್ಗೆ ಇಂದಿರಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.