ನಾಗ್ಪುರ: ಬಾಂಗ್ಲಾದೇಶದಿಂದ ಶುಕ್ರವಾರ ತೆರಳುತ್ತಿದ್ದ ವಿಮಾನದ ಪೈಲೆಟ್ ಗೆ ಮಾರ್ಗ ಮಧ್ಯೆ ತೀವ್ರ ಹೃದಯಾಘಾತವಾಗಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ.
ಏನಿದು ಘಟನೆ?
ಢಾಕಾದಿಂದ ಹೊರಟಿದ್ದ ಬಿಜಿ 22 ವಿಮಾನವು ಒಮನ್ ರಾಜಧಾನಿ ಮಸ್ಕತ್ ಗೆ26 ಪ್ರಯಾಣಿಕರನ್ನು ಸಾಗಿಸುತ್ತಿತ್ತು. ಈ ವೇಳೆ ಪೈಲಟ್ ನೌಶಾದ್ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರು ನಾಗ್ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆಗಾಗಿ ಇಳಿಸಿದ್ದಾರೆ. ಚತ್ತೀಸ್ ಗಢ ರಾಯ್ಪುರ ಮೇಲ್ಭಾಗದ ವಾಯು ಪ್ರದೇಶದಲ್ಲಿ ವಿಮಾನ ಹಾರುವಾಗ ಈ ಘಟನೆ ಸಂಭವಿಸಿದೆ. ಬೆಳಗ್ಗೆ 11.37ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಲಾಗಿದೆ. ಕೂಡಲೇ ಪೈಲಟ್ ನೌಶಾದ್ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ, ಅವರು ಈಗ ಚೇತರಿಸಿಕೊಂಡಿದ್ದಾರೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.