ಮಡಿಕೇರಿ: ನಕಲಿ ಆರ್ ಟಿಪಿಸಿಆರ್ ವರದಿಯೊಂದಿಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕೇರಳ ರಾಜ್ಯದ ದಂಪತಿಗಳನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದ ಪ್ರಕರಣ ವೀರಾಜಪೇಟೆ ಸಮೀಪದ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಲ್ಲಂಗೋಡು ಗ್ರಾಮದ ನಿವಾಸಿ ಸೈಯದ್ ಮೊಹಮ್ಮದ್ (32) ಮತ್ತು ಪತ್ನಿ ಅಯಿಷತ್ ರೆಹಮಾನ್ ಬಿ.ಎಂ ವಿರುದ್ಧ ನಕಲಿ ದಾಖಲೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೈಯದ್ ಮೊಹಮ್ಮದ್ ಕೊಡಗಿನ ಎಮ್ಮೆಮಾಡು ಗ್ರಾಮದಿಂದ ವಿವಾಹವಾಗಿದ್ದು, ಪತ್ನಿ ಅಯಿಷತ್ ರೆಹಮಾನ್ ಸಹಿತ ಅವರ ತವರು ಮನೆಗೆ ಆಗಮಿಸಿದ್ದಾರೆ. ಅಲ್ಲಿಂದ ಎಮ್ಮೆಮಾಡು ಅಮ್ಮತ್ತಿ ಮಾರ್ಗವಾಗಿ ಸಿದ್ದಾಪುರದ ಸ್ನೇಹಿತರ ಮನೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಮ್ಮತ್ತಿಯ ತಪಾಸಣೆ ಕೇಂದ್ರದಲ್ಲಿದ್ದ ಕಂದಾಯ ಇಲಾಖೆಯ ಅಮ್ಮತ್ತಿ ಗ್ರಾಮ ಲೆಕ್ಕಿಗರಾದ ಪ್ರವೀಣ್ ಮತ್ತು ಸಿದ್ದಾಪುರ ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಗಾರ್ ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗಳ ಕೋವಿಡ್ ನೆಗೆಟಿವ್ ವರದಿಯನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ವರದಿಯಲ್ಲಿ ಹೆಸರು ಸೈಯದ್ ಮೊಹಮ್ಮದ್, ಪತ್ನಿ ಅಯಿಷತ್ ರೆಹಮಾನ್ ಬಿ.ಎಂ ಎಂದು ನಮೂದಾಗಿದ್ದರೂ ಈ ವರದಿಯ ಕ್ಯುಆರ್ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಸ್ಕಾನ್ ರಿಪೋರ್ಟ್ ನಲ್ಲಿ ಸರ್ಫುದ್ದೀನ್ ಎಂಬ ಹೆಸರು ನಮೂದಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ, ರಾಜ್ಯದ ಗಡಿಯಲ್ಲಿ ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸಿದರೆ ಮಾತ್ರ ಪ್ರವೇಶಕ್ಕೆ ಅವಕಾಶವಿರುವುದು ತಿಳಿಯಿತು. ಪತ್ನಿಯ ತವರೂರು ಎಮ್ಮೆಮಾಡು ಗ್ರಾಮಕ್ಕೆ ಬರಬೇಕಿದ್ದ ಕಾರಣದಿಂದ ಮಂಜೇಶ್ವರದಲ್ಲಿ ನಕಲಿ ಆರ್.ಟಿ.ಪಿ.ಸಿ.ಆರ್ ಕೋವಿಡ್ ವರದಿಯನ್ನು ಸಿದ್ದಪಡಿಸಿಕೊಂಡು ಜಾಲ್ಸೂರು, ಸಂಪಾಜೆ, ಮಾರ್ಗವಾಗಿ ಎಮ್ಮೆಮಾಡುವಿಗೆ ಬಂದಿದ್ದೇನೆ. ನಂತರ ಸಿದ್ದಾಪುರದ ಸ್ನೇಹಿತರ ಮನೆಗೆ ತೆರಳುತ್ತಿದ್ದೆ ಎಂದು ಸೈಯದ್ ಮೊಹಮ್ಮದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಂಪತಿ ನೀಡಿರುವ ಆರ್.ಟಿ.ಪಿ.ಸಿ.ಆರ್ ವರದಿ ನಕಲಿ ಎಂದು ತಿಳಿದ ಹಿನ್ನೆಲೆಯಲ್ಲಿ ಅಮ್ಮತ್ತಿ ಗ್ರಾಮ ಲೆಕ್ಕಿಗರಾದ ಬಿ.ಕೆ.ಪ್ರವೀಣ್ ಅವರು ನೀಡಿರುವ ದೂರಿನ ಮೇರೆಗೆ ದಂಪತಿ ವಿರುದ್ದ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಅಧಿನಿಯಮ 2020 ರ ಅನ್ವಯ ಪ್ರಕರಣ ದಾಖಲಾಗಿದೆ. ಕೇರಳದಿಂದ ಕೊಡಗಿಗೆ ಆಗಮಿಸಲು ಉಪಯೋಗಿಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.